ಬಿಜೆಪಿ ಶಾಸಕ ಪುತ್ರನ ಮೇಲೆ ಅತ್ಯಾಚಾರ ಆರೋಪ ಪ್ರಕರಣ; ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೀದರ್: ಅತ್ಯಾಚಾರ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ವಜಾಗೊಳಿಸಿದೆ.
ಚೌಹಾಣ್ ಪುತ್ರನ ಪರ ವಕೀಲ ಎಂ.ಎಂ ಗೋಡ್ಬಲೆ ನಿರೀಕ್ಷಣಾ ಜಾಮೀನಿಗಾಗಿ ಜುಲೈ 29 ರಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿ ವಾದ-ವಿವಾದ ಆಲಿಸಿದ್ದ ಕೋರ್ಟ್ ಇಂದು ಜುಲೈ 31ಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಬಳಿಕ ಜಾಮೀನು ನೀಡದಂತೆ ಕೋರ್ಟ್ಗೆ ಸಂತ್ರಸ್ತೆ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಇನ್ನು ಸಂತ್ರಸ್ತೆ ಯುವತಿಯ ಪರ ಸರ್ಕಾರಿ ಅಭಿಯೋಜಕ ಕೇಶವ್ ಶ್ರೀಮಾಳೆ ಪ್ರತಿಕ್ರಿಯೆ ನೀಡಿದ್ದು, ತನಿಖೆ ಪ್ರಥಮ ಹಂತದಲ್ಲಿರುವುದರಿಂದ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ ಎಂದಿದ್ದಾರೆ.
ಬಿಜೆಪಿ ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ವಿರುದ್ಧ ಯುವತಿಯೊಬ್ಬಳು ಅತ್ಯಾಚಾರ ಕೇಸ್ ದಾಖಲಿಸಿದ್ದರು. ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಳು.




