Top Newsದೇಶ/ವಿದೇಶ

ದೇಶ ವಿರೋಧಿಗಳ ವಿರುದ್ಧ ಸ್ಪೈವೇರ್ ಬಳಸಿದ್ರೆ ತಪ್ಪೇನು? : ಸುಪ್ರೀಂಕೋರ್ಟ್

ಮಹತ್ವದ ಬೆಳವಣಿಗೆಯಲ್ಲಿ ದೇಶದಲ್ಲಿ ಭದ್ರತೆಗಾಗಿ ಬೇಹುಗಾರಿಕೆ ತಂತ್ರಾಂಶ ಬಳಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇದೇ ವೇಳೆ, ಖಾಸಗಿ ವ್ಯಕ್ತಿಗಳ ವಿರುದ್ಧ ಅದನ್ನು ಬಳಸಲಾಗುತ್ತಿದೆ ಎಂಬ ಆರೋಪಗಳನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದೆ.

ಪತ್ರಕರ್ತರು, ನ್ಯಾಯಾಧೀಶರು, ಕಾರ್ಯಕರ್ತರು ಮತ್ತಿತರರ ಮೇಲೆ ಕಣ್ಣಿಡಲು ಕೇಂದ್ರ ಸರ್ಕಾರ ಪೆಗಸಸ್‌ ಬೇಹು ತಂತ್ರಾಂಶ ಬಳಸಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ರೀತಿ ಹೇಳಿದೆ.

ಬೇಹು ತಂತ್ರಾಂಶ ಖರೀದಿಸಿದ್ದರೆ, ಸರ್ಕಾರ ಅದನ್ನು ಬಳಸುವುದನ್ನು ಯಾವುದೂ ತಡೆಯಲಾಗದು ಎಂದು ವಕೀಲರೊಬ್ಬರು ವಾದಿಸಿದರು.

ಆಗ ನ್ಯಾಯಾಲಯವು, ದೇಶ ಪ್ರತಿಗಾಮಿ ಶಕ್ತಿಗಳ ವಿರುದ್ಧ ಆ ಬೇಹುಗಾರಿಕೆ ತಂತ್ರಾಂಶ ಬಳಸುತ್ತಿದ್ದರೆ ತಪ್ಪೇನು? ಎಂದು ಕೇಳಿತು. ಬೇಹು ತಂತ್ರಾಂಶ ಹೊಂದಿರುವುದರಲ್ಲಿ ಯಾವುದೇ ತಪ್ಪಿಲ್ಲ. ರಾಷ್ಟ್ರದ ಭದ್ರತೆ ಕುರಿತಾಗಿ ರಾಜಿ ಅಥವಾ ತ್ಯಾಗ ಸಾಧ್ಯವಿಲ್ಲ. ಗೌಪ್ಯತೆಯ ಹಕ್ಕನ್ನು ಹೊಂದಿರುವ ಖಾಸಗಿ ನಾಗರಿಕರಿಗೆ ಸಂವಿಧಾನದ ಅಡಿಯಲ್ಲಿ ರಕ್ಷಣೆ ಇರುತ್ತದೆ. ಅದಕ್ಕೆ ಸಂಬಂಧಿಸಿದಂತೆ ಅವರ ದೂರನ್ನು ಸದಾ ಪರಿಶೀಲಿಸಬಹುದು ಎಂಬುದಾಗಿ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ.

ಬೇಹು ತಂತ್ರಾಂಶ ದುರುಪಯೋಗದ ಕುರಿತಾದ ತಜ್ಞರ ಸಮಿತಿಯ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎಂದ ಸುಪ್ರೀಂಕೋರ್ಟ್​, ಪ್ರಕಟಿಸಿದ್ರೆ ಅದು ಹಾದಿ- ಬೀದಿಯ ಚರ್ಚೆಯ ವಿಷಯವಾಗಿಬಿಡುತ್ತದೆ ಎಂದು ಹೇಳಿದೆ. ಪ್ರಕರಣದ ಮುಂದಿನ ವಿಚಾರಣೆ ಜುಲೈ 30ರಂದು ನಡೆಯಲಿದೆ.

 

Comments (0)

Your email address will not be published. Required fields are marked *

Back to top button