#Exclusive NewsTop Newsಮನರಂಜನೆಸಿನಿಮಾಸುದ್ದಿ

ಸರ್ಕಾರದ ಒತ್ತಾಯಕ್ಕೆ ಮಣಿದು ರೇವತಿ ಕುಟುಂಬಕ್ಕೆ ಅಲ್ಲು ಹಣ ಕೊಟ್ಟಿದ್ದೇಷ್ಟು…?

ಹೈದರಾಬಾದ್ : ಪುಷ್ಪಾ 2 ಪ್ರೀಮಿಯರ್ ಶೋ ವೇಳೆ ನಡೆದ ಕಾಲ್ತುಳಿತ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಿನ್ನೆ ಚಿಕ್ಕಡಪಲ್ಲಿ ಪೊಲೀಸ್ ಸ್ಟೇಷನ್‌ಗೆ ಬಂದ ನಟ ಅಲ್ಲು ಅರ್ಜುನ್ ಅವರು ಪೊಲೀಸರ ಖಡಕ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಲ್ಲು ಅರ್ಜುನ್ ವಿಚಾರಣೆಯ ಬೆನ್ನಲ್ಲೇ ಪುಷ್ಪ 2 ಚಿತ್ರ ತಂಡ ಇಂದು ಮಹತ್ವದ ನಿರ್ಧಾರಕ್ಕೆ ಬಂದಿದೆ.

ಕಳೆದ ಡಿಸೆಂಬರ್‌ 4 ರಂದು ಸಂಧ್ಯಾ ಥಿಯೇಟರ್‌ ಬಳಿ ಕಾಲ್ತುಳಿತ ಸಂಭವಿಸಿತ್ತು. ಈ ಬಗ್ಗೆ ಕೇಸ್ ದಾಖಲಿಸಿದ್ದ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನ ಅರೆಸ್ಟ್ ಮಾಡಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅಲ್ಲು ಅರ್ಜುನ್ ಅವರ ಅರೆಸ್ಟ್ ಪ್ರಕರಣ ರಾಜಕೀಯ ಬಣ್ಣ ಕೂಡ ಪಡೆದುಕೊಂಡಿದೆ. ಅಲ್ಲು ಅರ್ಜುನ್ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಮಧ್ಯೆ ಮುಸುಕಿನ ಗುದ್ದಾಟ ಮುಂದುವರಿದಿದೆ.

 

₹2 ಕೋಟಿ ಪರಿಹಾರ ಘೋಷಣೆ !

ನಟ ಅಲ್ಲು ಅರ್ಜುನ್ ಹಾಗೂ ಸಿಎಂ ರೇವಂತ್ ರೆಡ್ಡಿ ಅವರ ವಾಗ್ವಾದದ ಮಧ್ಯೆ ಮತ್ತೊಂದು ಅಹಿತಕರ ಘಟನೆ ನಡೆದಿತ್ತು. ಕೆಲ ಯುವಕರು ಅಲ್ಲು ಅರ್ಜುನ್ ಅವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಕಾಲ್ತುಳಿತದಲ್ಲಿ ಸಾವನ್ನಪ್ಪಿದ ರೇವತಿ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ನೀಡವಂತೆ ಒತ್ತಾಯಿಸಿದ್ದರು.

ಕಾಲ್ತುಳಿತದ ಘಟನೆ ಬಳಿಕ ನಟ ಅಲ್ಲು ಅರ್ಜುನ್ ಅವರು ರೇವತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಇದೀಗ ಪರಿಹಾರದ ಮೊತ್ತವನ್ನ 1 ಕೋಟಿ ರೂಪಾಯಿಗೆ ಏರಿಕೆ ಮಾಡಿದ್ದಾರೆ. ಇದರ ಜೊತೆಗೆ ಪುಷ್ಪ 2 ನಿರ್ಮಾಪಕ ₹50 ಲಕ್ಷ, ನಿರ್ದೇಶಕ ಸುಕುಮಾರ್ ಅವರು 50 ಲಕ್ಷ ರೂಪಾಯಿ ಪರಿಹಾರ ನೀಡಲು ನಿರ್ಧಾರ ಮಾಡಿದ್ದಾರೆ.

 

ಚಿಕಿತ್ಸೆಗೆ ಸ್ಪಂದಿಸಿದ ರೇವತಿ ಮಗ !

ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ರೇವತಿ ಸಾವನ್ನಪ್ಪಿದ್ದಾರೆ. ರೇವತಿ ಮಗ 9 ವರ್ಷದ ಶ್ರೀತೇಜಾಗೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದುರಂತ ಏನಂದ್ರೆ ತನ್ನ ತಾಯಿ ಸಾವನ್ನಪ್ಪಿರೋ ಸುದ್ದಿಯೇ ಶ್ರೀತೇಜಾಗೆ ಇನ್ನೂ ಗೊತ್ತಾಗಿಲ್ಲ.

ಕಾಲ್ತುಳಿತದಲ್ಲಿ ಗಾಯಗೊಂಡಿದ್ದ 9 ವರ್ಷದ ಶ್ರೀತೇಜಾನ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ಭೇಟಿ ನೀಡಿದ್ದ ತೆಲುಗು ಸಿನಿಮಾ ನಿರ್ಮಾಪಕ ದಿಲ್ ರಾಜ್‌ ಬಾಲಕ ಶ್ರೀತೇಜಾ ಚಿಕಿತ್ಸೆಗೆ ಹಣದ ನೆರವು ನೀಡಿದ್ದರು. ಅಲ್ಲು ಅರ್ಜುನ್, ತೆಲಂಗಾಣ ಸರ್ಕಾರ ಕೂಡ ಶ್ರೀತೇಜಾ ಚಿಕಿತ್ಸೆಯ ವೆಚ್ಚ ಭರಿಸುವ ಭರವಸೆ ನೀಡಿದೆ.

ನಿನ್ನೆವರೆಗೂ ICUನಲ್ಲಿದ್ದ ಬಾಲಕನ ಸ್ಥಿತಿ ಗಂಭೀರವಾಗಿತ್ತು. ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಬಾಲಕನ ಸ್ಥಿತಿ ಇಂದು ಸುಧಾರಿಸಿದೆ. ಶ್ರೀತೇಜಾ ಈಗ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಾ ಇದ್ದು, ವೆಂಟಿಲೇಟರ್ ತೆಗೆದು ಚಿಕಿತ್ಸೆ ಮುಂದುವರಿಸಲಾಗಿದೆ. ವೈದ್ಯರು ಈ ಮೊದಲು ವೆಂಟಿಲೇಟರ್ ಮೂಲಕ ಆಕ್ಸಿಜನ್ ನೀಡುತ್ತಿದ್ದರು. ಬಾಲಕನ ಮೆದುಳಿಗೆ ಆಕ್ಸಿಜನ್ ಸರಿಯಾಗಿ ಪೂರೈಕೆಯಾಗದೇ ಇದ್ದಿದ್ದರಿಂದ ಆಕ್ಸಿಜನ್ ನೀಡುತ್ತಿದ್ದರು. ಇದೀಗ ವೆಂಟಿಲೇಟರ್ ತೆಗೆದು ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

Comments (0)

Your email address will not be published. Required fields are marked *

Back to top button