#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷರಾಜಕೀಯರಾಜ್ಯವಿಶೇಷವೈರಲ್ ನ್ಯೂಸ್ಸುದ್ದಿ

ಖರ್ಗೆ ಹಾಗೂ ಎಂ.ಬಿ.ಪಾಟೀಲ್ ಕುಟುಂಬಕ್ಕೂ ಬಿಸಿಮುಟ್ಟಿಸಲು ಮುಂದಾದ ರಾಜ್ಯಪಾಲರು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ನಿವೇಶನ ಹಂಚಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿ ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ಕಾನೂನು ತಜ್ಞರಿಂದ ಮಾಹಿತಿ ಪಡೆದಿದ್ದಾರೆ. ಇದರೊಂದಿಗೆ, ಮುಡಾದಲ್ಲಿ ಸಿಎಂ ಸಿದ್ದರಾಮಯ್ಯಗೆ ಕಂಟಕ ಎದುರಾದಂತೆ ಎಐಸಿಸಿ ಅಧ್ಯಕ್ಷರಿಗೂ ಸಮಸ್ಯೆ ಎದುರಾಗಲಿದೆಯಾ ಎಂಬ ಅನುಮಾನ ಮೂಡಿದೆ.

ರಾಜ್ಯಪಾಲರಿಗೆ ಸಲ್ಲಿಕೆ ಮಾಡಿರುವ ಅಭಿಪ್ರಾಯದಲ್ಲಿ ತಜ್ಞರು, ತರಾತುರಿಯಲ್ಲಿ ಭೂಮಿ ಹಂಚಿಕೆ ಮಾಡಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ಅರ್ಜಿ ಸಲ್ಲಿಕೆಯಾದ ಎರಡೇ ದಿನಗಳಲ್ಲಿ ಭೂ ಹಂಚಿಕೆ ಪ್ರಕ್ರಿಯೆ ಮಾಡಿರುವುದರಿಂದ ಪ್ರಶ್ನೆ ಮೂಡಿದೆ ಎಂದಿದ್ದಾರೆ.

ಇದೀಗ ರಾಜ್ಯಪಾಲರು ತಜ್ಞರ ಅಭಿಪ್ರಾಯ ಪರಿಶೀಲಿಸಿ ಪ್ರಕರಣದ ಸಂಬಂಧ ಹೆಚ್ಚಿನ ತನಿಖೆಗೆ ಆದೇಶಿಸುವ ಸಾಧ್ಯತೆ ಇದೆ. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಎಂಬಿ ಪಾಟೀಲ್ ವಿರುದ್ಧ ತನಿಖೆಗೆ ಅನುಮತಿ ನೀಡುವ ಸಾಧ್ಯತೆ ಇದೆ. ನಿಯಮ ಲೋಪ ಆಧರಿಸಿ ರಾಜ್ಯಪಾಲರಿಂದ ತನಿಖೆಗೆ ಆದೇಶ ಸಾಧ್ಯತೆ ಇದೆ.

ಒಂದು ವೇಳೆ ಪ್ರಿಯಾಂಕ್ ಖರ್ಗೆ ಹಾಗೂ ಎಂಬಿ ಪಾಟೀಲ್ ವಿರುದ್ಧ ರಾಜ್ಯಪಾಲರು ತನಿಖೆಗೆ ಆದೇಶಿಸಿದಲ್ಲಿ ರಾಜ್ಯಪಾಲರು ಹಾಗೂ ರಾಜ್ಯ ಸರ್ಕಾರದ ನಡುವಣ ಸಂಘರ್ಷ ತಾರಕ್ಕೇರಲಿದೆ. ಈಗಾಗಲೇ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಸರ್ಕಾರ ಸಿಡಿದೆದ್ದಿದೆ. ವಿವಿಗಳಿಗೆ ಕುಲಪತಿ ನೇಮಕ ವಿಚಾರದಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸುವ ನಿಟ್ಟಿನಲ್ಲಿ ವಿಧೇಯಕಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದೀಗ ಮತ್ತೊಂದು ಸುತ್ತಿನ ಕದನಕ್ಕೆ ಅಖಾಡ ಸಿದ್ಧವಾಗುತ್ತಿದೆ.

 

 

 

Comments (0)

Your email address will not be published. Required fields are marked *

Back to top button