Health

ವೈದ್ಯರ ಎಡವಟ್ಟು-ಚಿಂತಾಮಣಿಯಲ್ಲಿ ಬಾಣಂತಿ ಸಾವು

Hospital negligence- Pregnant death

ಆಸ್ಪತ್ರೆ ಮುಂಭಾಗ ಶವವಿಟ್ಟು ಕುಟುಂಬಸ್ಥರ ಆಕ್ರೋಶ!

ಚಿಂತಾಮಣಿ: ವೈದ್ಯರ ನಿರ್ಲಕ್ಷ್ಯ ಮತ್ತು ಚಿಕಿತ್ಸಾ ವೈಫಲ್ಯಕ್ಕೆ ಬಾಣಂತಿಯೊಬ್ಬರು ಬಲಿಯಾಗಿರುವ ಘಟನೆ ಚಿಂತಾಮಣಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.ಆಪರೇಷನ್ ವೇಳೆ ವೈದ್ಯರು ಮಾಡಿದ ಎಡವಟ್ಟಿನಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಕುಟುಂಬಸ್ಥರು ರಾತ್ರಿಯಿಡೀ ಪ್ರತಿಭಟನೆ ನಡೆಸಿದ್ದಾರೆ.

ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಗ್ರಾಮದ ನರ್ಮದಾ (25) ಮೃತಪಟ್ಟ ದುರ್ದೈವಿ.ಎರಡು ತಿಂಗಳ ಹಿಂದೆಯಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದ ನರ್ಮದಾ,ಇತ್ತೀಚೆಗೆ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆಗೆ (ಮಕ್ಕಳಾಗದಂತೆ ಆಪರೇಷನ್) ಒಳಗಾಗಿದ್ದರು.ಶಸ್ತ್ರಚಿಕಿತ್ಸೆಯ ನಂತರ ಎರಡು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದರು.ಆದರೆ,ಆಪರೇಷನ್ ಮಾಡಿದ ಜಾಗದಲ್ಲಿ ತೀವ್ರ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಕುಟುಂಬಸ್ಥರು ಅವರನ್ನು ಮತ್ತೆ ಅದೇ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ, ಆಸ್ಪತ್ರೆ ತಲುಪುತ್ತಿದ್ದಂತೆ ನೋವು ತಾಳಲಾರದೆ ನರ್ಮದಾ ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆ ವಿರುದ್ಧ ಗಂಭೀರ ಆರೋಪ
ಬಾಣಂತಿಯ ಸಾವಿನಿಂದ ಆಕ್ರೋಶಗೊಂಡ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಆಸ್ಪತ್ರೆಯ ವೈದ್ಯರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.ವೈದ್ಯರ ನಿರ್ಲಕ್ಷ್ಯ: ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಮಾಡಿದ ತಪ್ಪು ಅಥವಾ ಎಡವಟ್ಟಿನಿಂದಲೇ ಸೋಂಕು ಉಂಟಾಗಿ ಸಾವು ಸಂಭವಿಸಿದೆ.

ಔಷಧಿ ದಂಧೆ: ಸರ್ಕಾರಿ ಆಸ್ಪತ್ರೆಯಾಗಿದ್ದರೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅಗತ್ಯವಿದ್ದ ಔಷಧಿಗಳನ್ನು ಆಸ್ಪತ್ರೆ ಸಿಬ್ಬಂದಿ ಹೊರಗಡೆಯಿಂದ ತರಿಸಿಕೊಂಡಿದ್ದಾರೆ.
ತುರ್ತು ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ವೈದ್ಯರು ವಿಫಲರಾಗಿದ್ದು ವೈದ್ಯಕೀಯ ಲೋಪ ಕಂಡು ಬಂದಿದೆ.

ಸಚಿವರ ಕ್ಷೇತ್ರದಲ್ಲಿ ಜನತೆಯ ಆಕ್ರೋಶ
ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಸುಧಾಕರ್ ಅವರ ಸ್ವಕ್ಷೇತ್ರದಲ್ಲೇ ಇಂತಹ ದುಸ್ಥಿತಿ ಎದುರಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. “ಸರ್ಕಾರಿ ಆಸ್ಪತ್ರೆಗೆ ಬಡವರು ನಂಬಿಕೆಯಿಂದ ಬರುತ್ತಾರೆ, ಆದರೆ ಇಲ್ಲಿನ ವೈದ್ಯರ ನಿರ್ಲಕ್ಷ್ಯ ಬಾಣಂತಿಯ ಪ್ರಾಣವನ್ನೇ ಕಸಿದಿದೆ,” ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.ರಾತ್ರಿಯಿಡೀ ಆಸ್ಪತ್ರೆಯ ಮುಂಭಾಗ ಶವವನ್ನಿಟ್ಟು ಧರಣಿ ನಡೆಸಿದ ಸಂಬಂಧಿಕರು, ತಪ್ಪಿತಸ್ಥ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

#Chintamani #MaternalDeath #MedicalNegligence #HospitalProtest #ChintamaniNews #FreedomTV #DrMCSudhakar #KarnatakaHealth #JusticeForNarmada #GovernmentHospital

Comments (0)

Your email address will not be published. Required fields are marked *

Back to top button