

ಬೆಂಗಳೂರು: ನಗರದ ಲಕ್ಷಾಂತರ ಆಸ್ತಿ ಮಾಲೀಕರ ಬಹುಕಾಲದ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಬಿ-ಖಾತಾ ಆಸ್ತಿಗಳನ್ನು ಎ-ಖಾತಾ ಆಗಿ ಪರಿವರ್ತಿಸಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಇಳಿಕೆ ಮಾಡುವ ಮೂಲಕ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ನಗರವಾಸಿಗಳಿಗೆ ಉಡುಗೊರೆ ನೀಡಿದ್ದಾರೆ.
ನೂರೇ ದಿನದ ಸುವರ್ಣ ಅವಕಾಶ!
ಸುದ್ದಿಗೋಷ್ಠಿ ನಡೆಸಿದ ಡಿ.ಕೆ. ಶಿವಕುಮಾರ್ ಅವರು, ಈ ಯೋಜನೆಯನ್ನು ಸರ್ಕಾರದ ‘ಆರನೇ ಗ್ಯಾರಂಟಿ’ ಎಂದೇ ಬಣ್ಣಿಸಿದ್ದಾರೆ.ಆಸ್ತಿ ಪರಿವರ್ತನೆಗಾಗಿ ಈ ಹಿಂದೆ ಇದ್ದ ಶೇ. 5ರಷ್ಟು ಗೈಡ್ಲೈನ್ ವ್ಯಾಲ್ಯೂ ಶುಲ್ಕವನ್ನು ಈಗ ಕೇವಲ ಶೇ. 2ಕ್ಕೆ ಇಳಿಸಲಾಗಿದೆ. ಅಂದರೆ ಸಾರ್ವಜನಿಕರಿಗೆ ನೇರವಾಗಿ ಶೇ. 60ರಷ್ಟು ರಿಯಾಯಿತಿ ಸಿಗಲಿದೆ.”ಇಂದು ಬೆಂಗಳೂರಿನ ಜನತೆಗೆ 100 ದಿನಗಳ ‘ಸುವರ್ಣ ಅವಕಾಶ’ ನೀಡುತ್ತಿದ್ದೇವೆ.ಈ ಅವಧಿಯಲ್ಲಿ ಅರ್ಜಿ ಸಲ್ಲಿಸುವವರಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ,” ಎಂದು ಡಿಸಿಎಂ ತಿಳಿಸಿದರು.ಆದರೆ ಕೇವಲ 100 ದಿನಗಳ ಒಳಗಾಗಿ ಈ ಆಸ್ತಿ ಪರಿವರ್ತನೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಮುಖ ಉದ್ದೇಶ
ಅನಧಿಕೃತ ಲೇಔಟ್ಗಳಲ್ಲಿರುವ ಆಸ್ತಿಗಳಿಗೆ ಕಾನೂನುಬದ್ಧ ಮಾನ್ಯತೆ ನೀಡುವುದು ಮತ್ತು ಬ್ಯಾಂಕ್ ಸಾಲ ಸೌಲಭ್ಯಕ್ಕೆ ದಾರಿ ಮಾಡಿಕೊಡುವುದು. “ನಮ್ಮ ಖಾತೆ, ನಮ್ಮ ಹಕ್ಕು” ಈ ಅಭಿಯಾನದ ಮೂಲಕ 23 ಲಕ್ಷ ಆಸ್ತಿ ಮಾಲೀಕರಿಗೆ ಮನೆ ಬಾಗಿಲಿಗೇ ದಾಖಲೆ ತಲುಪಿಸುವ ಗುರಿ ಹೊಂದಲಾಗಿದೆ. ಕಟ್ಟಡ ಉಲ್ಲಂಘನೆ ಮಿತಿಯನ್ನು ಶೇ. 5 ರಿಂದ ಶೇ. 15 ಕ್ಕೆ ಏರಿಸಲು ಸರ್ಕಾರ ಮುಂದಾಗಿದ್ದು, ಇದರಿಂದ ಸಾವಿರಾರು ಕುಟುಂಬಗಳಿಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಪಡೆಯಲು ಸುಲಭವಾಗಲಿದೆ. ನಗರದ ಅಭಿವೃದ್ಧಿ ಮತ್ತು ನಾಗರಿಕರ ಆಸ್ತಿ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ. ಬಿ-ಖಾತಾ ಹೊಂದಿರುವವರು ಈ 100 ದಿನಗಳ ಕಾಲಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.
#BangaloreNews #DKShivakumar #BKhataToAKhata #PropertyTax #BBMP #NammaBengaluru #FreedomTV #KarnatakaGovernment #RealEstateUpdate #PropertyRights




