Top Newsಜಿಲ್ಲೆದೇಶ/ವಿದೇಶಸುದ್ದಿ

ಇರಾನ್-ಇಸ್ರೇಲ್ ಸಂಘರ್ಷ; ದುಬೈನಲ್ಲಿ ಸಿಲುಕಿದ ಬಳ್ಳಾರಿಯ 35 ಪ್ರವಾಸಿಗರು

ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಸಂಘರ್ಷದಿಂದಾಗಿ ಭಾರಿ ಉದ್ವಿಗ್ನತೆ ನಿರ್ಮಾಣವಾಗಿದ್ದು, ಪ್ರವಾಸಕ್ಕಾಗಿ ದುಬೈಗೆ ತೆರಳಿದ್ದ ಬಳ್ಳಾರಿ ಮೂಲದ 35 ಪ್ರವಾಸಿಗರು ಅಲ್ಲಿಯೇ ಸಿಲುಕಿಕೊಳ್ಳುವಂತಾಗಿದೆ. ಈ ಪ್ರವಾಸಿಗರ ತಂಡದಲ್ಲಿ ಬಳ್ಳಾರಿಯ ಯಾಳ್ಪಿ ಪಂಪನಗೌಡ ಕುಟುಂಬದ 15 ಸದಸ್ಯರು ಸೇರಿ ಒಟ್ಟು 35 ಮಂದಿ ಇದ್ದು, ವಿಮಾನ ಹಾರಾಟದ ವ್ಯತ್ಯಯದಿಂದಾಗಿ ಭಾರತಕ್ಕೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯಕ್ಕೆ ಪ್ರವಾಸಿಗರು ತಮ್ಮ ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಾವು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ್ದರೂ ಸಹ ಊರಿಗೆ ಮರಳುವ ಆತಂಕ ಕಾಡುತ್ತಿದೆ.

ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಈಗಾಗಲೇ ಪ್ರವಾಸಿಗರನ್ನು ಸಂಪರ್ಕಿಸಿದ್ದು, ನಾಳೆಯಿಂದ ವಿಮಾನ ಸಂಚಾರ ಪುನಾರಂಭಗೊಳ್ಳುವ ಸಾಧ್ಯತೆ ಇರುವುದರಿಂದ ಸುರಕ್ಷಿತವಾಗಿ ವಾಪಸ್ ಕರೆತರುವ ಭರವಸೆ ನೀಡಿದ್ದಾರೆ. ಇದರ ನಡುವೆ ಚಿತ್ರದುರ್ಗದ 15 ಮಂದಿ ಕೂಡ ಇದೇ ಪರಿಸ್ಥಿತಿಯಲ್ಲಿ ಸಿಲುಕಿದ್ದು, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರೂ ಸಹ ದುಬೈನಲ್ಲೇ ಇದ್ದು ಅಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ.

ಫೆಬ್ರವರಿ 24ರಂದು ಐದು ದಿನಗಳ ಪ್ರವಾಸಕ್ಕೆಂದು ತೆರಳಿದ್ದ ಈ 50 ಜನರ ತಂಡವು ಫೆಬ್ರವರಿ 28ರಂದು ರಾತ್ರಿ ಭಾರತಕ್ಕೆ ಮರಳಬೇಕಿತ್ತು. ಆದರೆ ಯುದ್ಧದ ಉದ್ವಿಗ್ನತೆಯಿಂದಾಗಿ ವಿಮಾನ ನಿಲ್ದಾಣದ ಪ್ರವೇಶಕ್ಕೆ ನಿರ್ಬಂಧ ಹೇರಿದ್ದರಿಂದ ಅವರು ಹೊರಗೇ ಉಳಿಯಬೇಕಾಯಿತು. ಸದ್ಯ ಪ್ರವಾಸಿಗರು ಹಣದ ಕೊರತೆಯಿಂದ ಪರದಾಡುತ್ತಿದ್ದು, ಕೂಡಲೇ ತಮ್ಮನ್ನು ರಕ್ಷಿಸುವಂತೆ ಸರ್ಕಾರದ ಮೊರೆ ಹೋಗಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ನಾಗೇಂದ್ರ ಅವರಿಂದ ಮಾಹಿತಿ ಪಡೆದಿದ್ದು, ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Comments (0)

Your email address will not be published. Required fields are marked *

Back to top button