ನವದೆಹಲಿ: ಕೆಂಪು ಕೋಟೆ ಬಳಿ ನಡೆದ ಭೀಕರ ಕಾರ್ ಬಾಂಬ್ ಸ್ಫೋಟದ ಹಿಂದಿನ ನಿಗೂಢತೆ DNA ಪರೀಕ್ಷೆಯಲ್ಲಿ ದೃಢಪಡಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹುಂಡೈ ಐ20 ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಡಾ. ಉಮರ್ ಉನ್ ನಬಿ ಎನ್ನುವುದು ಅಧಿಕೃತ ತನಿಖಾ ಸಂಸ್ಥೆಗಳು ದೃಢಪಡಿಸಿವೆ.. ಡಾ. ಉಮರ್ ಅವರ ತಾಯಿಯ ಡಿಎನ್ ಮಾದರಿಗಳು, ಸ್ಫೋಟದ ಸ್ಥಳದಿಂದ ಸಂಗ್ರಹಿಸಲಾದ ಮೂಳೆಗಳು ಮತ್ತು ಹಲ್ಲುಗಳಿಂದ ಹೊರತೆಗೆಯಲಾದ ಡಿಎನ್‌ಎ ಮಾದರಿಗಳೊಂದಿಗೆ ಹೊಲಿಕೆಯಾದ ಬಳಿಕ ಈ ವಿಷಯ ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಕೆಂಪುಕೋಟೆ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ 12 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಹತ್ತಿರದ ಅಂಗಡಿಗಳ ಗಾಜಿನ ಕಿಟಕಿಗಳು ಪುಡಿಪುಡಿಯಾಗಿವೆ. ಘಟನಾ ಸ್ಥಳದ ಸುತ್ತಮುತ್ತ ತೀವ್ರ ಹಾನಿಯಾಗಿದೆ.
ಸ್ಫೋಟಕ್ಕೆ ಬಳಸಲಾದ ಬಿಳಿ ಬಣ್ಣದ ಹುಂಡೈ i20 ಕಾರನ್ನು 10 ದಿನಗಳ ಹಿಂದಷ್ಟೇ ಡಾ.ಉಮರ್ ಖರೀದಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಅದರಂತೆ ಆರಂಭದಲ್ಲಿ ಕಾರಿನ ಸುತ್ತವೇ ತನಿಖೆ ನಡೆದಿತ್ತು. ಸ್ಫೋಟದ ನಂತರ ಕಾರಿನ ಬಳಿ ಆತನ ಮೃತದೇಹದ ಅವಶೇಷಗಳು ಪತ್ತೆಯಾಗಿದ್ದರೂ, ಗುರುತಿಸುವಿಕೆ ಸಾಧ್ಯವಾಗಿರಲಿಲ್ಲ. ಈಗ ಪುಲ್ವಾಮಾದಲ್ಲಿ ಆತನ ಕುಟುಂಬದಿಂದ ಸಂಗ್ರಹಿಸಲಾದ ಡಿಎನ್‌ಎ ಹಾಗೂ ಸ್ಫೋಟದ ಸ್ಥಳದಲ್ಲಿ ಸಿಕ್ಕ ಮೃತದೇಹದ DNA ಮ್ಯಾಚ್ ಆಗಿದೆ ಎಂದು ತನಿಖಾ ಸಂಸ್ಥೆ ತಿಳಿಸಿದೆ. ಸ್ಫೋಟಗೊಂಡ ಕಾರಿನಲ್ಲಿ ಉಮರ್ ಇದ್ದಿದ್ದು ದೃಢವಾಗಿದೆ.
ಜೈಶ್-ಎ-ಮೊಹಮ್ಮದ್ ಲಾಜಿಸ್ಟಿಕ್ಸ್ ಮಾಡ್ಯೂಲ್‌ನೊಂದಿಗೆ ಉಮರ್ ಸಂಬಂಧ ಹೊಂದಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಮಾಡ್ಯೂಲ್‌ನಲ್ಲಿ 5 ರಿಂದ 6 ವೈದ್ಯರು ಸೇರಿದಂತೆ ಸುಮಾರು 9 ರಿಂದ 10 ಸದಸ್ಯರಿದ್ದರು. ಈ ಸೈತಾನರು ರಾಸಾಯನಿಕ ವಸ್ತುಗಳು ಮತ್ತು ಸ್ಫೋಟಕ ವಸ್ತುಗಳನ್ನು ಪಡೆಯಲು ತಮ್ಮ ವೈದ್ಯಕೀಯ ವೃತ್ತಿಯ ಹೆಸರು ಬಳಸಿಕೊಂಡಿದ್ದರು.


