Top Newsಜಿಲ್ಲೆಸುದ್ದಿ

ಬೆಳೆ ಕಾಯಲು ಹೋದ ಯುವಕ ಕೆರೆ ದಂಡೆಯಲ್ಲಿ ಹೆಣವಾದ…!

ಕಲಬುರಗಿ: ಚಿಂಚೋಳಿ ತಾಲೂಕಿನ ದೋಟಿಕೋಳ ಗ್ರಾಮದಲ್ಲಿ ಬೆಳೆ ಕಾಯಲು ಜಮೀನಿಗೆ ತೆರಳಿದ್ದ ಯುವಕನೊಬ್ಬ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿರುವುದು ಭಾರೀ ಆತಂಕ ಮೂಡಿಸಿದೆ. 25 ವರ್ಷದ ಶರಣು ಭಾಸಗಿ ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಎಂದಿನಂತೆ ರಾತ್ರಿ ವೇಳೆ ಕಾಡುಪ್ರಾಣಿಗಳಿಂದ ಬೆಳೆ ರಕ್ಷಣೆ ಮಾಡಲು ಜಮೀನಿಗೆ ಹೋಗಿ ಅಲ್ಲಿಯೇ ಮಲಗಿದ್ದ ಯುವಕ, ಮರುದಿನ ದೋಟಿಕೋಳ ಕೆರೆಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಜಮೀನಿನಲ್ಲಿ ಮಲಗಿದ್ದ ವ್ಯಕ್ತಿ ಕೆರೆಯ ಬಳಿ ಹೆಣವಾಗಿ ಬಿದ್ದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಯುವಕನ ಸಾವು ಸಹಜವಲ್ಲ, ಇದೊಂದು ವ್ಯವಸ್ಥಿತ ಕೊಲೆ ಎಂದು ಕುಟುಂಬಸ್ಥರು ಗಂಭೀರ ಶಂಕೆ ವ್ಯಕ್ತಪಡಿಸಿದ್ದಾರೆ. ಶರಣು ಸಾವಿನ ಹಿಂದೆ ಹಳೆಯ ದ್ವೇಷ ಅಥವಾ ಬೇರೆ ಯಾವುದೋ ಉದ್ದೇಶವಿರಬಹುದು ಎಂದು ಆರೋಪಿಸಿರುವ ಸಂಬಂಧಿಕರು, ಮೃತದೇಹ ಪತ್ತೆಯಾದ ಸ್ಥಳದ ಸ್ಥಿತಿಗತಿಗಳನ್ನು ಕಂಡು ಆಕ್ರೋಶ ಹೊರಹಾಕಿದ್ದಾರೆ. ಮಗನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸಾವಿನ ರಹಸ್ಯ ಭೇದಿಸಲು ಶ್ವಾನದಳ ಹಾಗೂ ವಿಧಿವಿಜ್ಞಾನ ತಂಡವನ್ನು ಕರೆಯಿಸಿ ಸ್ಥಳದಲ್ಲಿ ಲಭ್ಯವಿರುವ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಸದ್ಯ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ತನಿಖೆ ತೀವ್ರಗೊಂಡಿದ್ದು, ಶೀಘ್ರದಲ್ಲೇ ಈ ನಿಗೂಢ ಸಾವಿನ ಹಿಂದಿರುವ ಸತ್ಯಾಂಶ ಹೊರಬರುವ ಸಾಧ್ಯತೆಯಿದೆ.

Comments (0)

Your email address will not be published. Required fields are marked *

Back to top button