ಶಿಕ್ಷಣ

ಶಿಕ್ಷಣ ಇಲಾಖೆ ಮತ್ತೆ ಎಡವಟ್ಟು : ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆ ತರುವಂತೆ ಮೌಖಿಕ ಆದೇಶ..?

ಬೆಂಗಳೂರು : ಶಿಕ್ಷಣ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳ ಪ್ರವೇಶದ್ವಾರದ ಮೇಲೆ ಹಾಕಲಾಗಿದ್ದ ಕೈಮುಗಿದು ಬನ್ನಿ ಘೋಷವಾಕ್ಯದ ಬದಲಾಗಿ ಧೈರ್ಯವಾಗಿ ಪ್ರಶ್ನಿಸಿ ಎಂದು ಬದಲಾವಣೆ ವಿವಾದ ಆಗಿತ್ತು.

ಸಾರ್ವಜನಿಕರ ಆಕ್ರೋಶ, ಖಂಡನೆ ವ್ಯಕ್ತವಾಗುತ್ತಿದಂತೆ , ಯುಟರ್ನ್ ಹೊಡೆದ ಸರ್ಕಾರ, ಆದೇಶದ ಬಗ್ಗೆ ಸ್ಪಷ್ಟನೆ ನೀಡಿತ್ತು. ಬಳಿಕ ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸಿತ್ತು. ಇದರ ಬೆನ್ನಲ್ಲೇ, ಈಗ ಹತ್ತನೇ ತರಗತಿ ವಿದ್ಯಾರ್ಥಿಗಳೇ ಪರೀಕ್ಷೆಗೆ ಉತ್ತರ ಪತ್ರಿಕೆ ತರಬೇಕೆಂದು ಮೌಖಿಕ ಸೂಚನೆ ನೀಡಿ ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಇತ್ತೀಚೆಗೆ ಪರೀಕ್ಷೆ ವೆಚ್ಚವೆಂದು ವಿದ್ಯಾರ್ಥಿಗಳಿಂದ 50ರೂ, ವಸೂಲಿ ಮಾಡಿದ್ದ ಸರ್ಕಾರ, ಪರೀಕ್ಷೆ ಶುಲ್ಕ ವಸೂಲಿ ಮಾಡಿದ್ದಲ್ಲದೇ ಇದೀಗ ಹತ್ತನೇ ತರಗತಿಗೆ ನಡೆಯುವ ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆಗಳನ್ನ ತರುವಂತೆ ಶಾಲೆಯಿಂದ ಮೌಖಿಕ ಸೂಚನೆ ನೀಡಿದೆ. ಈ ಸಂಬಂಧ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಪ್ರತಿಕ್ರಿಯಿಸಿದ್ದು, ಮಕ್ಕಳಿಂದ ಉತ್ತರ ಪತ್ರಿಕೆ ತರುವಂತೆ ಹೇಳಿರುವ ಶಿಕ್ಷಣ ಇಲಾಖೆ ನಡೆಯುನ್ನು ಖಂಡಿಸಿದ್ದಾರೆ.

ಪರೀಕ್ಷೆ ವೆಚ್ಚವೆಂದು ವಿದ್ಯಾರ್ಥಿಗಳಿಂದ 50ರೂ . ವಸೂಲಿ ಮಾಡಿದ್ದಲ್ಲದೆ ಈಗ ಪತ್ರಿಕೆಗಳನ್ನ ವಿದ್ಯಾರ್ಥಿಗಳೇ ತರಬೇಕು ಎಂದಿರುವುದು ಎಷ್ಟು ಸರಿ.? ಎಂದು ಪ್ರಶ್ನಿಸಿದ್ದಾರೆ. ಪರೀಕ್ಷೆ ವೇಳೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ರೀತಿ ಮಾಡುತ್ತಿದ್ದಾರೆ ಎಂದು ನನಗೆ ಅನಿಸುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಪೂರ್ವ ಸಿದ್ದತೆ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂದು ಶಾಲೆಗಳಿಗೆ ಕೊಟ್ಟಿರುವ ಮೌಖಿಕ ಆದೇಶ ವಾಪಸ್ ಪಡೆಯುವಂತೆ ಒತ್ತಾಯಿಸಿದ್ದಾರೆ. ಶಿಕ್ಷಣ ಇಲಾಖೆ ಒಂದಾದ ಮೇಲೊಂದು ವಿವಾದ ಮೈಮೇಲೆ ಎಳೆದುಕೊಳ್ಳುತ್ತಿದೆ.

Comments (0)

Your email address will not be published. Required fields are marked *

Back to top button