ಜಿಲ್ಲೆರಾಜಕೀಯ

Loksabha ಚುನಾವಣೆಯಲ್ಲಿ ‘ಕೈ’ಗೆ ಮತ ನೀಡದಿದ್ರೆ ಗ್ಯಾರಂಟಿ ಯೋಜನೆ ರದ್ದು

ಮಾಗಡಿ : ರಾಜ್ಯದ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಕೊಟ್ಟರೂ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಪಡೆಯದಿದ್ದರೆ ಗ್ಯಾರಂಟಿಗಳನ್ನು ರದ್ದು ಮಾಡುವುದೇ ಒಳ್ಳೆಯದು. ಈ ಕುರಿತು, ಮುಖ್ಯಮಂತ್ರಿ ಅವರಿಗೂ ಹೇಳಿದ್ದೇನೆ ಎಂದು ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ಶ್ರೀಗಿರಿಪುರದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಧರ್ಮ ರಾಜಕಾರಣದ ಮಂತ್ರಾಕ್ಷತೆ ಬೇಕೋ ಅಥವಾ ಜನಸಾಮಾನ್ಯರ ಜೀವನ ಬದಲಿಸುತ್ತಿರುವ ಕಾಂಗ್ರೆಸ್‌ನ ಗ್ಯಾರಂಟಿ ಬೇಕೊ ಎಂದು ಜನ ಈ ಚುನಾವಣೆಯಲ್ಲಿ ತೀರ್ಮಾನ ಮಾಡಬೇಕು ಎಂದರು.

ಒಂದು ವೇಳೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೇನಾದರೂ ಕಡಿಮೆ ಸ್ಥಾನ ಗಳಿಸಿದರೆ, ಜನ ಗ್ಯಾರಂಟಿಗಳನ್ನು ತಿರಸ್ಕರಿಸಿದ್ದಾರೆ ಎಂದರ್ಥ. ಆಗ, ಅವುಗಳನ್ನು ರದ್ದು ಮಾಡಿ ನಾವೂ ಅವರಂತೆ ಮಂದಿರದ ರಾಜಕಾರಣ ಮಾಡಬೇಕಾಗುತ್ತದೆ ಎಂದರು.

ನಿಮ್ಮ ಮತ ಅಕ್ಷತೆ ಕಾಳಿಗಾ..ಐದು ಗ್ಯಾರಂಟಿಗಾ ಯೋಚನೆ ಮಾಡಿ ಎಂದು ಸಂಸದ ಡಿ.ಕೆ.ಸುರೇಶ್ ಮುಂದೆ ಪ್ರಶ್ನಿಸಿದ ಅವರು ಈ ಬಾರಿಯ ಲೋಕಸಭಾ ಚುನಾವಣೆ ಗ್ಯಾರಂಟಿ ಮತ್ತು ಅಕ್ಷತೆ ಕಾಳಿಗಾ. ನಾವು ಎಲ್ಲಾ ಹಿಂದೂಗಳೇ, ಆದ್ರೆ ದೇವಸ್ಥಾನ ಹೆಸರಿನಲ್ಲಿ ಮತ ಪಡೆಯೋದು ಸರಿಯಲ್ಲ. ಹಾಗಾಗಿ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಅವುಗಳ ಆಧಾರದ ಮೇಲೆಯೇ ಜನರ ಬಳಿ ಮತ ಕೇಳುತ್ತೇವೆ ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button