ರಾಜಕೀಯ

ಮಾಸ್ಕ್ ಧರಿಸಿ BMTC ಬಸ್​ನಲ್ಲಿ ಬೈರತಿ ಸುರೇಶ್ ಸಂಚಾರ – ಸಚಿವರಿಂದ ರಿಯಾಲಿಟಿ ಚೆಕ್!

Bairati Suresh travels in a BMTC bus wearing a mask - Reality check from the minister!

ಬೆಂಗಳೂರು : ಸಾರಿಗೆ ವ್ಯವಸ್ಥೆಯ ವಾಸ್ತವ ಸ್ಥಿತಿಯನ್ನು ಕಣ್ಣಾರೆ ಕಾಣಲು ರಾಜ್ಯದ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ರಾತ್ರಿ ಬಿಎಂಟಿಸಿ ಬಸ್‌ಗಳಲ್ಲಿ ದಿಢೀರ್ ಪ್ರಯಾಣಿಸಿ ಪರಿಶೀಲನೆ ನಡೆಸಿದರು.

ಮಾಸ್ಕ್ ಧರಿಸಿ ಪ್ರಯಾಣ ಮಾಡಿದ್ದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರಿಗಾಗಲೀ ಅಥವಾ ಚಾಲಕ, ಕಂಡಕ್ಟರ್‌ಗೆ ಆಗಲೀ ಇವರು ಸಚಿವರು ಎಂಬುದು ಗಮನಕ್ಕೆ ಬರಲಿಲ್ಲ. ಪ್ರತಿಯೊಂದು ಬಸ್‌ಗೂ ನಿಗದಿತ ಹಣ ನೀಡಿ ಪ್ರಯಾಣಿಸಿದ ಸಚಿವರು, ಕೆಲವು ಪ್ರಯಾಣಿಕರೊಂದಿಗೆ ಬಸ್ ಸಂಚಾರದ ಬಗ್ಗೆ ವಿಚಾರಿಸಿದರು.

ಹೆಬ್ಬಾಳದಿಂದ ನಾಗಶೆಟ್ಟಿಹಳ್ಳಿಗೆ ಹೋಗುವ ಬಸ್ ಹತ್ತಿದ ಸಚಿವರು, ಎರಡು ಟಿಕೆಟ್‌ಗಳಿಗೆ 100 ರೂಪಾಯಿ ನೋಟು ನೀಡಿದರು. ಇದಕ್ಕೆ ಕಂಡಕ್ಟರ್, ಚಿಲ್ಲರೆ ಇಲ್ಲ ಎಂದು ಉತ್ತರಿಸಿದರು. ತಮಗೆ ಚಿಲ್ಲರೆ ಇಲ್ಲ ಎಂದು ಸಚಿವರು ಹೇಳಿದಾಗ, ಕಂಡಕ್ಟರ್ ತಮ್ಮ ಬ್ಯಾಗ್ ತೋರಿಸಿ, ನನ್ನ ಬಳಿಯೂ ಚಿಲ್ಲರೆ ಇಲ್ಲ, ಚಿಲ್ಲರೆ ಇಲ್ಲದಿದ್ದರೆ ಕೆಳಗಿಳಿಯಿರಿ ಎಂದು ಸೂಚಿಸಿದರು. ಸಚಿವರು ಯಾವುದೇ ಪ್ರತಿರೋಧ ತೋರದೆ, ಮೌನವಾಗಿ ಬಸ್ಸಿನಿಂದ ಕೆಳಗಿಳಿದರು.

ಶನಿವಾರ ರಾತ್ರಿ 7:10 ರಿಂದ 9:10 ರವರೆಗೆ ಸುಮಾರು ಎರಡು ಗಂಟೆಗಳ ಕಾಲ ಸಚಿವರು ಬೆಂಗಳೂರಿನ ವಿವಿಧ ಮಾರ್ಗಗಳಲ್ಲಿ ಸಂಚರಿಸಿದರು. ಜಯಮಹಲ್, ಟಿವಿ ಟವರ್, ಆರ್​​ಟಿ ನಗರ, ಸಿಬಿಐ ರಸ್ತೆ, ಹೆಬ್ಬಾಳ, ಭೂಪಸಂದ್ರ, ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ಹೆಣ್ಣೂರು ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಬಸ್‌ಗಳಲ್ಲಿ ಪ್ರಯಾಣಿಸಿ, ಬಿಎಂಟಿಸಿ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಹತ್ತಿರದಿಂದ ಗಮನಿಸಿದರು.

ಸಾರ್ವಜನಿಕ ಸಾರಿಗೆಯಲ್ಲಿ ಸಚಿವರೇ ಸ್ವತಃ ಪ್ರಯಾಣಿಸಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿರುವುದು, ಮುಂಬರುವ ದಿನಗಳಲ್ಲಿ ಬಿಎಂಟಿಸಿ ಬಸ್‌ಗಳಲ್ಲಿನ ಸಣ್ಣಪುಟ್ಟ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರಿಯಾಗಲಿದೆ ಎನ್ನಲಾಗುತ್ತಿದೆ.

Comments (0)

Your email address will not be published. Required fields are marked *

Back to top button