ಮುಂಬೈನಲ್ಲಿ ಮಳೆ ಆರ್ಭಟ – ಕಟ್ಟಡ ಕುಸಿದು 6 ಮಂದಿ ದುರ್ಮರಣ!
Heavy rains in Mumbai - 6 dead as building collapses!

ಮುಂಬೈ: ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಮುಂಬೈ ನಲುಗಿದ್ದು, ಮನ್ಖುರ್ದ್ ಪ್ರದೇಶದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಪರಿಣಾಮ ಆರು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. ಭಾರೀ ಮಳೆಯ ನಡುವೆಯೂ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ನಿನ್ನೆ ರಾತ್ರಿ ಸುಮಾರು 8.30ರ ಸುಮಾರಿಗೆ ಮನ್ಖುರ್ದ್‌ನ ಜನತಾ ನಗರದಲ್ಲಿರುವ ಹನುಮಾನ್ ಮಂದಿರದ ಹಿಂಭಾಗದ ಕಟ್ಟಡದ ಒಂದು ಭಾಗ ದಿಢೀರನೆ ಕುಸಿದು ಬಿದ್ದಿದೆ. ಘಟನೆಯಲ್ಲಿ ಓರ್ವರಿಗೆ ಗಾಯಗೊಂಡಿದ್ದು, ಇನ್ನೊಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಕಟ್ಟಡ ಕುಸಿಯುತ್ತಿದ್ದಂತೆ ಸ್ಥಳೀಯರು ಕೂಡಲೇ ರಕ್ಷಣಾ ಕಾರ್ಯಕ್ಕೆ ಮುಂದಾದರು. ಬಳಿಕ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ಮುಂಬೈ ಅಗ್ನಿಶಾಮಕ ದಳ, ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಮತ್ತು ಸ್ಥಳೀಯ ಪೊಲೀಸರು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.
ಅವಶೇಷಗಳಡಿಯಿಂದ ಹೊರತೆಗೆಯಲಾದ ನಾಲ್ವರು ಮಹಿಳೆಯರು ಮತ್ತು ಓರ್ವ ಪುರುಷ ಸ್ಥಳದಲ್ಲೇ ಮೃತಪಟ್ಟಿದ್ದರು. ಮತ್ತೊಬ್ಬ ವ್ಯಕ್ತಿಯನ್ನು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ ಆರುಕ್ಕೇರಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಒಬ್ಬರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ಅವರನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಹರಸಾಹಸ ಪಡುತ್ತಿವೆ.
ಮಳೆಯಿಂದ ಅಸ್ತವ್ಯಸ್ತಗೊಂಡ ಮುಂಬೈ
ಧಾರಾಕಾರ ಮಳೆಯಿಂದ ಮುಂಬೈ ನಗರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.