ವೈರಲ್ ನ್ಯೂಸ್

ಟೋಲ್ ಬೂತ್‌ಗೆ LPG ಟ್ಯಾಂಕರ್ ಡಿಕ್ಕಿ – ಐವರು ದುರ್ಮರಣ!

LPG tanker crashes into toll booth - five dead!

ಲಕ್ನೋ: ಎಲ್‌ಪಿಜಿ ಸಾಗಿಸುತ್ತಿದ್ದ ಟ್ಯಾಂಕರ್ ಟೋಲ್ ಬೂತ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ಸ್ಫೋಟದಲ್ಲಿ ಐವರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದೆ. ಈ ಅಪಘಾತದ ಸಿಸಿಟಿವಿ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜೂನ್ 26 ರಂದು ಬೆಳಗ್ಗೆ 6:40ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಇಂದು ಸಿಸಿಟಿವಿ ದೃಶ್ಯಾವಳಿಗಳು ಬೆಳಕಿಗೆ ಬಂದಿವೆ. ಎರಡು ಟ್ಯಾಂಕರ್‌ಗಳು ಟೋಲ್ ಪ್ಲಾಜಾದತ್ತ ವೇಗವಾಗಿ ಬರುತ್ತಿದ್ದವು. ಈ ಪೈಕಿ ಒಂದು ಟ್ಯಾಂಕರ್ ಇದ್ದಕ್ಕಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ, ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದು, ಬಳಿಕ ನೇರವಾಗಿ ಟೋಲ್ ಪ್ಲಾಜಾಗೆ ಡಿಕ್ಕಿ ಹೊಡೆದಿದೆ.‌

ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಅನಿಲ ಸೋರಿಕೆಯಾಗಿ, ಕೆಲವೇ ಕ್ಷಣಗಳಲ್ಲಿ ಅನಿಲ ಬೆಂಕಿಯನ್ನು ಆವರಿಸಿಕೊಂಡು ಭಾರಿ ಸ್ಫೋಟ ಸಂಭವಿಸಿದೆ. ತಕ್ಷಣ ಟ್ಯಾಂಕರ್‌ ಸ್ಫೋಟಗೊಂಡು ಬೆಂಕಿ ಜ್ವಾಲೆ ಆವರಿಸಿತು.

ಮೃತಪಟ್ಟವರು ಮತ್ತು ಗಾಯಾಳುಗಳು

ಈ ಭೀಕರ ಅಪಘಾತದಲ್ಲಿ ಟ್ಯಾಂಕರ್ ಚಾಲಕ 40 ವರ್ಷದ ಧರ್ಮೇಂದ್ರ ದುಬೆ ಮತ್ತು ಟೋಲ್ ಪ್ಲಾಜಾ ಉದ್ಯೋಗಿ ಅಲೋಕ್ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹಲವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇನ್ನೂ ಮೂವರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಐದಕ್ಕೇರಿದೆ.

ಸ್ಫೋಟದ ಪರಿಣಾಮ ಟೋಲ್ ಪ್ಲಾಜಾ ಬಳಿ ನಿಲ್ಲಿಸಲಾಗಿದ್ದ 16 ಮೋಟಾರ್ ಬೈಕ್‌ಗಳು ಮತ್ತು ಎರಡು ಕಾರುಗಳು ಬೆಂಕಿಗೆ ಆಹುತಿಯಾಗಿ ಸಂಪೂರ್ಣವಾಗಿ ಭಸ್ಮವಾಗಿವೆ.

Comments (0)

Your email address will not be published. Required fields are marked *

Back to top button