chamarajnagar

ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ; ದಲಿತ ಮಕ್ಕಳಿಗೆ ಸಿಎಂ ಸ್ಥಾನವಿಲ್ಲ- ಎನ್. ಮಹೇಶ್ ವಾಗ್ದಾಳಿ!

Ex minister N. Mahesh slams Congress for not giving CM post to Dalits

ಕೊಳ್ಳೇಗಾಲ/ಚಾಮರಾಜನಗರ: ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಆಯ್ತು. ಡಿ.ಕೆ. ಶಿವಕುಮಾರ್ ಅವರ ಪಟ್ಟಾಭಿಷೇಕಕ್ಕೆ ಸಿದ್ಧತೆ ನಡೀತಿದೆ. ಈ ನಡುವೆಯೇ, ದಲಿತ ಮುಖ್ಯಮಂತ್ರಿ (Dalit CM) ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದು ಭಾರಿ ಸಂಚಲನ ಸೃಷ್ಟಿಸಿದೆ. “ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ ಎಂಬಂತಾಗಿದೆ ರಾಜ್ಯದಲ್ಲಿ ದಲಿತರ ಸ್ಥಿತಿ” ಎಂದು ಕೊಳ್ಳೇಗಾಲದಲ್ಲಿ ಮಾಜಿ ಸಚಿವ ಎನ್. ಮಹೇಶ್ ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಈ ಬಾರಿ ದಲಿತ ಸಿಎಂ ಕನಸು ಕಂಡಿದ್ದೆ!

ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಎಂಬುದು ಕೇವಲ ಒಂದು ಕನಸಾಗಿಯೇ ಉಳಿದುಹೋಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಎನ್. ಮಹೇಶ್, ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣದ ವಿರುದ್ಧ ಚಾಟಿ ಬೀಸಿದರು. “ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದರೆ ಈ ಬಾರಿಯಾದರೂ ಒಬ್ಬ ದಲಿತ ನಾಯಕನಿಗೆ ಸಿಎಂ ಪಟ್ಟ ಸಿಗುತ್ತದೆ, ದಲಿತರು ಮುಖ್ಯಮಂತ್ರಿಯಾಗುತ್ತಾರೆ ಎಂದು ರಾಜ್ಯದ ದಲಿತ ಸಮುದಾಯ ದೊಡ್ಡ ನಿರೀಕ್ಷೆ ಇಟ್ಟುಕೊಂಡಿತ್ತು. ಆದರೆ ಹೈಕಮಾಂಡ್ ನಿರ್ಧಾರದಿಂದ ಆ ನಿರೀಕ್ಷೆ ಸಂಪೂರ್ಣ ಸುಳ್ಳಾಗಿದೆ. ದಲಿತರು ಎಲ್ಲಿಯವರೆಗೆ ಒಂದು ನಿರ್ದಿಷ್ಟ ಪಕ್ಷದ ಕುರುಡು ವೋಟ್ ಬ್ಯಾಂಕ್ ಆಗಿ ಇರುತ್ತಾರೋ, ಅಲ್ಲಿಯವರೆಗೆ ಅವರಿಗೆ ರಾಜಕೀಯದಲ್ಲಿ ಉನ್ನತ ಸ್ಥಾನಮಾನ ಸಿಗುವುದಿಲ್ಲ.” ಎಂದರು.

ಕಾಂಗ್ರೆಸ್ ಪಕ್ಷವು ದಲಿತ ನಾಯಕರನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬುದಕ್ಕೆ ಎನ್. ಮಹೇಶ್ ಉದಾಹರಣೆಗಳನ್ನು ಬಿಚ್ಚಿಟ್ಟರು.
“ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ ಎಂಬ ಒಂದೇ ಒಂದು ಆಸೆಯಿಂದ ಇಡೀ ದಲಿತ ಸಮುದಾಯ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಅಧಿಕಾರಕ್ಕೆ ತಂದಿತು. ಆದರೆ ಅವರಿಗೆ ಸಿಎಂ ಪಟ್ಟ ಸಿಗಲೇ ಇಲ್ಲ. ಇನ್ನು ಡಾ. ಜಿ. ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಿ ಬಿಡುತ್ತಾರೆ ಎಂಬ ಕಾರಣಕ್ಕಾಗಿಯೇ ಯೋಜಿತವಾಗಿ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು” ಎಂದು ಗಂಭೀರ ಆರೋಪ ಮಾಡಿದರು.

“ದಲಿತರ ಆತ್ಮಾವಲೋಕನಕ್ಕೆ ಇದು ಸಕಾಲ”
“ತಾವು ದಲಿತರನ್ನು ಮುಖ್ಯಮಂತ್ರಿ ಮಾಡಲಿ ಅಥವಾ ಬಿಡಲಿ, ದಲಿತರು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಲ್ಲ, ಅವರು ನಮ್ಮ ಕಾಯಂ ಓಟ್ ಬ್ಯಾಂಕ್ ಎಂದು ಕಾಂಗ್ರೆಸ್ ಅಂದುಕೊಂಡಿದೆ. ಈ ರಾಜಕೀಯ ಸೂಕ್ಷ್ಮತೆ ಮತ್ತು ಸತ್ಯ ಸಮುದಾಯದ ಜನರಿಗೆ ಅರ್ಥವಾಗುವವರೆಗೂ ದಲಿತರಿಗೆ ಸೂಕ್ತ ಸ್ಥಾನಮಾನ ಸಿಗುತ್ತದೆ ಎಂಬುದು ಕೇವಲ ಭ್ರಮೆ ಅಷ್ಟೇ. ಹಾಗಾಗಿ, ದಲಿತರು ಒಟ್ಟಾಗಿ ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲು ಇದು ಅತ್ಯಂತ ಸಕಾಲ” ಎಂದು ಎನ್. ಮಹೇಶ್ ಕರೆ ನೀಡಿದ್ದಾರೆ. ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿರುವ ಈ ಹೊತ್ತಿನಲ್ಲೇ ಎನ್. ಮಹೇಶ್ ಬಿಟ್ಟಿರುವ ಈ ‘ದಲಿತ ಸಿಎಂ’ ಬಾಂಬ್, ಕರುನಾಡ ರಾಜಕೀಯದಲ್ಲಿ ಮತ್ತೊಂದು ಸುತ್ತಿನ ದೊಡ್ಡ ಚರ್ಚೆಗೆ ಕಾರಣವಾಗಿದೆ.

#NMahesh #DalitCM #KarnatakaPolitics #CongressVoteBank #MallikarjunKharge #GParameshwara #Kollegal #Chamarajanagar #FreedomTV #BreakingNews #SiddaramaiahResigns #DKShivakumar #DalitLeaders #KarnatakaNewGovernment

Comments (0)

Your email address will not be published. Required fields are marked *

Back to top button