chamarajnagar

ಹನೂರಿನಲ್ಲಿ ಮಳೆಯ ರೌದ್ರನರ್ತನ- ಮನೆ,ಅಂಗಡಿಗಳೆಲ್ಲಾ ಮಳೆಮಯ!

Heavy rain in Hanur Chamarajanagar water flows in Shops and houses

ಹನೂರು (ಚಾಮರಾಜನಗರ): ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಇಡೀ ಗ್ರಾಮವೇ ಜಲಾವೃತಗೊಂಡಿದ್ದು,ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಯಲ್ಲೆಲ್ಲಾ ದೊಡ್ಡ ಹಳ್ಳದಂತೆ ಹರಿದ ಮಳೆನೀರು ತಗ್ಗು ಪ್ರದೇಶದ ಮನೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿ ಭಾರಿ ಅವಾಂತರ ಸೃಷ್ಟಿ ಮಾಡಿದೆ.ಮಳೆಯ ಅವಾಂತರದಿಂದ ಜನರು ಹೈರಾಣಾಗಿದ್ದಾರೆ

ಮನೆ ತುಂಬೆಲ್ಲಾ ನೀರು; ಸಾಮಗ್ರಿಗಳ ನಾಶ!
ಲೊಕ್ಕನಹಳ್ಳಿ ಗ್ರಾಮದ ಸುಬ್ರಮಣ್ಯ ಎಂಬುವವರ ಮನೆ ಸೇರಿದಂತೆ ತಗ್ಗು ಪ್ರದೇಶದಲ್ಲಿದ್ದ ಹತ್ತಾರು ಮನೆಗಳಿಗೆ ದಿಢೀರನೆ ಮಳೆನೀರು ನುಗ್ಗಿದೆ. ಇದರಿಂದಾಗಿ ಮನೆಯಲ್ಲಿದ್ದ ದಿನಸಿ ಪದಾರ್ಥಗಳು ಬಟ್ಟೆ ಹಾಗೂ ಇತರ ಗೃಹಬಳಕೆಯ ಸಾಮಗ್ರಿಗಳು ನೀರು ಪಾಲಾಗಿವೆ. ರಭಸವಾಗಿ ಬಂದ ನೀರನ್ನು ಹೊರಹಾಕಲು ಹರಸಾಹಸ ಪಟ್ಟ ನಿವಾಸಿಗಳು,ಇಡೀ ರಾತ್ರಿಯನ್ನು ಆತಂಕದಲ್ಲೇ ದೂಡಿದ್ದಾರೆ.

ಜನತೆಗೆ ತ್ಯಾಜ್ಯ, ಸರಿಸೃಪಗಳ ಭಯ!
ಕೇವಲ ಮಳೆನೀರು ಮಾತ್ರವಲ್ಲದೆ, ನೀರಿನ ರಭಸಕ್ಕೆ ಗ್ರಾಮದ ರಸ್ತೆಗಳಲ್ಲಿದ್ದ ಕಸ-ಕಡ್ಡಿ ಹಾಗೂ ವಿಷಕಾರಿ ಹಾವು ಚೇಳುಗಳು ಕೂಡ ಮನೆಗಳ ಆವರಣಕ್ಕೆ ತೇಲಿ ಬರುತ್ತಿರುವುದು ತಗ್ಗು ಪ್ರದೇಶದ ಜನರಲ್ಲಿ ಮತ್ತಷ್ಟು ಭೀತಿ ಹುಟ್ಟಿಸಿದೆ. ಜೀವ ಕೈಯಲ್ಲಿ ಹಿಡಿದು ಕುಳಿತಿರುವ ಸ್ಥಳೀಯರು, ತಕ್ಷಣವೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಲೊಕ್ಕನಹಳ್ಳಿ ಹಾಗೂ ಒಡೆಯರಪಾಳ್ಯ ಮುಖ್ಯ ರಸ್ತೆಯಂತೂ ಮಳೆಯ ಆರ್ಭಟಕ್ಕೆ ಸಂಪೂರ್ಣವಾಗಿ ಕೆರೆಯಂತಾಗಿ ಮಾರ್ಪಟ್ಟಿತ್ತು.ರಸ್ತೆಯ ಮೇಲೆ ಅಡಿಗಟ್ಟಲೆ ನೀರು ಹರಿಯುತ್ತಿದ್ದರಿಂದ ದ್ವಿಚಕ್ರ ವಾಹನ ಹಾಗೂ ಲಘು ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಸವಾರರು ತೀವ್ರ ಕಷ್ಟ ಅನುಭವಿಸಿದರು.

ಗ್ರಾಮ ಪಂಚಾಯಿತಿ ವಿರುದ್ಧ ಸಾರ್ವಜನಿಕರ ಆಕ್ರೋಶ!
ಈ ಜಲಾವೃತ ಅವಾಂತರಕ್ಕೆ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತದ ಬೇಜವಾಬ್ದಾರಿಯೇ ನೇರ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಿನಿಂದ ಹರಿದು ಬರುವ ‘ಸಿರಹಳ್ಳ’ಕ್ಕೆ ಸಮರ್ಪಕವಾದ ರೀತಿಯಲ್ಲಿ ಚರಂಡಿ ಹಾಗೂ ತಡೆಗೋಡೆ ಕಾಮಗಾರಿ ಮಾಡದೆ ನಿರ್ಲಕ್ಷ್ಯ ತಾಳಿದ್ದೇ ಈ ಅವಾಂತರಕ್ಕೆ ಕಾರಣ. ಇಂದು ಮಳೆನೀರೆಲ್ಲಾ ಊರಿನ ಕಡೆ ತಿರುಗಿ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಂಗಡಿಗಳಿಗೆ ನೀರು ನುಗ್ಗಿದ ಪರಿಣಾಮ ವರ್ತಕರಿಗೂ ಸಹ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.ಒಂದೆಡೆ ಮಳೆಯಾಗದೆ ಕಂಗಾಲಾಗಿದ್ದ ರೈತರಿಗೆ ಈ ಮಳೆ ಹರ್ಷ ತಂದಿದ್ದರೂ, ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರಿಗೆ ಮಾತ್ರ ಶಾಪವಾಗಿ ಪರಿಣಮಿಸಿದೆ.

#Chamarajanagar #HanurRain #Lokkanahalli #HeavyRain #Floods #KarnatakaRain #PublicOutrage #GramPanchayat #RainHavoc #LocalNews #FreedomTV #BreakingNews

Comments (0)

Your email address will not be published. Required fields are marked *

Back to top button