ರಾಜಕೀಯಸುದ್ದಿ

ಕಾಂಗ್ರೆಸ್‌ನಲ್ಲಿ ತ್ರಿಮೂರ್ತಿಗಳ ರಹಸ್ಯ ಸಮಾಲೋಚನೆ, ಬಿ.ಕೆ. ಹರಿಪ್ರಸಾದ್ ದಿಢೀರ್ ಆ್ಯಕ್ಟಿವ್!

ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಸದಾ ಸೈಲೆಂಟ್ ಆಗಿರುತ್ತಿದ್ದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಈಗ ದಿಢೀರ್ ಆ್ಯಕ್ಟಿವ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದಾರೆ. ಸಂಪುಟ ಪುನಾರಚನೆ ಮತ್ತು ಅಧಿಕಾರ ಹಂಚಿಕೆಯ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಹರಿಪ್ರಸಾದ್ ಅವರು ಅತ್ಯಂತ ಅಗ್ರೆಸಿವ್ ಆಗಿ ಅಖಾಡಕ್ಕಿಳಿದಿದ್ದಾರೆ. ನಿನ್ನೆ ತಡರಾತ್ರಿ ಸಚಿವರಾದ ಜಿ. ಪರಮೇಶ್ವರ್ ಮತ್ತು ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿ ಮಾಡಿ ಗಂಟೆಗಳ ಕಾಲ ಸಮಾಲೋಚನೆ ನಡೆಸಿದ್ದು, ಈ ತ್ರಿಮೂರ್ತಿಗಳ ಸಭೆಯು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈ ಸಭೆಯಲ್ಲಿ ಪ್ರಮುಖ ನಾಯಕರು ಪರಸ್ಪರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆಯ ಮುನ್ಸೂಚನೆ ಸಿಕ್ಕಂತಾಗಿದೆ.

ಈ ರಹಸ್ಯ ಸಭೆಯಲ್ಲಿ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಸ್ಪಷ್ಟ ನಿಲುವು ತಳೆದಿದ್ದಾರೆ ಎನ್ನಲಾಗಿದ್ದು, ಒಂದು ವೇಳೆ ಸಂಪುಟ ಪುನಾರಚನೆಯಾದರೆ ತಮಗೂ ಒಂದು ಸಚಿವ ಸ್ಥಾನ ಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಅಧಿಕಾರ ಹಂಚಿಕೆ ಅನಿವಾರ್ಯವಾದರೆ ಆ ಸಂದರ್ಭದಲ್ಲಿ ನಮ್ಮ ಬಣದ ಬೇಡಿಕೆಗಳನ್ನು ಒಗ್ಗಟ್ಟಾಗಿ ಮಂಡಿಸೋಣ ಎಂಬ ತೀರ್ಮಾನಕ್ಕೆ ನಾಯಕರು ಬಂದಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತು ವರಿಷ್ಠರಿಗೆ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಕುರಿತು ಚರ್ಚಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಇತ್ತೀಚಿನ ಹೇಳಿಕೆಗಳು ಸಮಾಧಾನ ತಂದಿದ್ದರೂ, ದೆಹಲಿ ನಾಯಕರು ಒಂದು ವೇಳೆ ಬುಲಾವ್ ನೀಡಿದರೆ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂಬ ನಿರ್ಧಾರಕ್ಕೆ ಈ ತ್ರಿಮೂರ್ತಿಗಳು ಸಮ್ಮತಿಸಿದ್ದಾರೆ.

ಇದೇ ವೇಳೆ ಅಧಿಕಾರ ಹಂಚಿಕೆ ಅಥವಾ ಮುಖ್ಯಮಂತ್ರಿ ಬದಲಾವಣೆಯಂತಹ ನಿರ್ಣಾಯಕ ಸಂದರ್ಭ ಎದುರಾದರೆ, ಈ ಬಾರಿ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿ ಪಟ್ಟ ನೀಡಬೇಕು ಎಂಬ ಪ್ರಬಲ ಒತ್ತಾಯವನ್ನು ಹೈಕಮಾಂಡ್ ಮುಂದೆ ಇಡಲು ನಾಯಕರು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ದಲಿತ ಸಿಎಂ ಎಂಬ ಕಾರ್ಡ್ ಬಳಸುವ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರಲು ಇಂದಿನ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಮತ್ತೊಮ್ಮೆ ಸಭೆ ಸೇರಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಿರುವ ಈ ನಾಯಕರು, ಮುಂದಿನ ರಾಜಕೀಯ ಬೆಳವಣಿಗೆಗಳಿಗೆ ಅನುಗುಣವಾಗಿ ತಮ್ಮ ಮುಂದಿನ ಹೆಜ್ಜೆ ಇಡಲು ಸನ್ನದ್ಧರಾಗಿದ್ದಾರೆ.

Comments (0)

Your email address will not be published. Required fields are marked *

Back to top button