bengaluruರಾಜಕೀಯರಾಜ್ಯ

ಅಬ್ದುಲ್ ಜಬ್ಬಾರ್ ರಾಜೀನಾಮೆ ಅಂಗೀಕರಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್; ನೂತನ ಸಮಿತಿ ರಚನೆ


ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ತಮ್ಮ ಸ್ಥಾನಕ್ಕೆ ಶನಿವಾರ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಅಂಗೀಕರಿಸಿದ್ದು, ಅಬ್ದುಲ್ ಜಬ್ಬಾರ್ ನೇತೃತ್ವದ ಸಮಿತಿಯನ್ನು ವಿಸರ್ಜಿಸಿ ಶೀಘ್ರದಲ್ಲೇ ನೂತನ ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ. ಈ ಬೆಳವಣಿಗೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಜಬ್ಬಾರ್ ಅವರು, ಒಂದೇ ಕುಟುಂಬದ ನಾಲ್ವರಿಗೆ ಟಿಕೆಟ್ ನೀಡಿರುವುದನ್ನು ಪ್ರಶ್ನಿಸುವುದು ತಪ್ಪೇ ಎಂದು ಹೈಕಮಾಂಡ್ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಉಪಚುನಾವಣೆ ಸೇರಿದಂತೆ ಪಕ್ಷದ ಆಂತರಿಕ ಮುನಿಸು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂದು ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಭಿಷೇಕ್ ದತ್ ನೀಡಿದ ವರದಿಯ ನಂತರ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ.

ಇದರೊಂದಿಗೆ ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ನಾಯಕರ ನಡುವಿನ ಜಟಾಪಟಿ ತೀವ್ರಗೊಂಡಿದ್ದು, ಸಚಿವ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧವೂ ಕೆಲವು ಶಾಸಕರು ಹೈಕಮಾಂಡ್‌ಗೆ ದೂರು ನೀಡಿದ್ದಾರೆ. ಸಚಿವ ಸಂಪುಟ ಪುನಾರಚನೆಯ ವೇಳೆ ಜಮೀರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂಬ ಒತ್ತಾಯ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಅವರಿಗೂ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪಕ್ಷ ವಿರೋಧಿ ಚಟುವಟಿಕೆ ಅಥವಾ ಅಶಿಸ್ತಿನ ಕಾರಣಕ್ಕೆ ಅಮಾನತು ಮಾಡುವ ಮುನ್ಸೂಚನೆ ಅರಿತೇ ಅಬ್ದುಲ್ ಜಬ್ಬಾರ್ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಈ ಎಲ್ಲಾ ಗೊಂದಲಗಳಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸದ್ಯಕ್ಕೆ ಅಂತರ ಕಾಯ್ದುಕೊಂಡಿದ್ದಾರೆ. ಈ ರಾಜಕೀಯ ಬೆಳವಣಿಗೆಗಳು ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿವೆ.

Comments (0)

Your email address will not be published. Required fields are marked *

Back to top button