ಸಿನಿಮಾಸುದ್ದಿ

ರಾಮ್ ಚರಣ್ ಅಭಿನಯದ ‘ಪೆದ್ದಿ’: ಜಾನ್ವಿ-ಮೃಣಾಲ್ ಜೊತೆ ಶೂಟಿಂಗ್ ಶುರು..!

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ, ಬುಚ್ಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದ ಬಗ್ಗೆ ರೋಚಕ ಅಪ್‌ಡೇಟ್ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಮುಂದಿನ ವಾರದಿಂದ ಈ ಚಿತ್ರದ ಬಹುಮುಖ್ಯ ಹಾಡಿನ ಚಿತ್ರೀಕರಣ ಆರಂಭವಾಗಲಿದ್ದು, ಇದರಲ್ಲಿ ರಾಮ್ ಚರಣ್ ಜೊತೆ ಬಾಲಿವುಡ್ ನಟಿಯರಾದ ಜಾನ್ವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಒಟ್ಟಾಗಿ ಹೆಜ್ಜೆ ಹಾಕಲಿದ್ದಾರೆ. ಹಳ್ಳಿ ಸೊಗಡಿನ ಈ ಹಾಡಿಗೆ ಖ್ಯಾತ ನೃತ್ಯ ಸಂಯೋಜಕ ಶೇಖರ್ ಮಾಸ್ಟರ್ ಕೊರಿಯೋಗ್ರಫಿ ಮಾಡುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ‘ಚಿಕಿರಿ ಚಿಕಿರಿ’ ಹಾಡಿನ ಯಶಸ್ಸಿನ ನಂತರ ಈ ಹೊಸ ಹಾಡಿನ ಮೇಲೆ ಭಾರಿ ನಿರೀಕ್ಷೆ ವ್ಯಕ್ತವಾಗಿದೆ.

ಚಿತ್ರದ ಬಿಡುಗಡೆ ವಿಚಾರಕ್ಕೆ ಬಂದರೆ, ಈ ಮೊದಲು ಏಪ್ರಿಲ್ 30ರಂದು ಸಿನಿಮಾ ತೆರೆಗೆ ಬರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಇನ್ನೂ ಬಾಕಿ ಇರುವುದರಿಂದ ಬಿಡುಗಡೆ ದಿನಾಂಕ ಮುಂದೂಡಿಕೆಯಾಗುವ ಸಾಧ್ಯತೆ ಇದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಸ್ಪಷ್ಟನೆ ಸಿಗದಿದ್ದರೂ, ಸ್ಟಾರ್ ಕಲಾವಿದರ ದಂಡೇ ಇರುವುದರಿಂದ ‘ಪೆದ್ದಿ’ ಚಿತ್ರದ ಮೇಲೆ ಸಿನಿರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್ ಸೃಷ್ಟಿಯಾಗಿದೆ. ವಿಶೇಷವಾಗಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

Comments (0)

Your email address will not be published. Required fields are marked *

Back to top button