ರಾಜಕೀಯರಾಜ್ಯಸುದ್ದಿ

ಜಿಲ್ಲೆಯ ಎರಡು ಬಣಗಳ ಮಧ್ಯೆ ಈಗ ಬಾಯಿ.. ಬಾಯಿ..!

ದಾವಣಗೆರೆ ಉಪಚುನಾವಣೆಯ ಅಖಾಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಒಳಗಿನ ಬಣ ರಾಜಕೀಯವು ವಿಭಿನ್ನ ತಿರುವುಗಳನ್ನು ಪಡೆದುಕೊಂಡಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಆಯ್ಕೆಗೂ ಮುನ್ನ ಜಿ.ಎಂ. ಸಿದ್ದೇಶ್ವರ್ ಮತ್ತು ರೇಣುಕಾಚಾರ್ಯ ತಂಡಗಳ ನಡುವೆ ತೀವ್ರ ಗುದ್ದಾಟ ನಡೆದಿತ್ತು. ಈ ಭಿನ್ನಮತದ ನಡುವೆಯೇ ಹೈಕಮಾಂಡ್ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಇದೀಗ ರಾಜ್ಯ ನಾಯಕರು ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಜಿ.ಎಂ. ಸಿದ್ದೇಶ್ವರ್ ಅವರು ಜೊತೆಯಾಗಿ ನಾಮಪತ್ರ ಸಲ್ಲಿಕೆ ಮತ್ತು ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ತಮ್ಮ ನಡುವಿನ ಭಿನ್ನಾಭಿಪ್ರಾಯಗಳಿಗೆ ಸದ್ಯಕ್ಕೆ ತಿಲಾಂಜಲಿ ಹಾಡಿರುವುದು ಕಂಡುಬರುತ್ತಿದೆ. ಆದರೆ ಬಿಜೆಪಿಯ ಈ ಒಗ್ಗಟ್ಟು ಚುನಾವಣೆಯವರೆಗಿನ ತಾತ್ಕಾಲಿಕ ಹೊಂದಾಣಿಕೆಯೋ ಅಥವಾ ಶಾಶ್ವತ ಬದಲಾವಣೆಯೋ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.

ಮತ್ತೊಂದೆಡೆ, ಕಾಂಗ್ರೆಸ್ ಪಕ್ಷದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲೇ ಬಣ ರಾಜಕೀಯದ ಬಿಕ್ಕಟ್ಟು ತಲೆದೋರಿದೆ. ಅಭ್ಯರ್ಥಿ ಆಯ್ಕೆಯ ವೇಳೆ ಸಚಿವ ಎಸ್‌ .ಎಸ್. ಮಲ್ಲಿಕಾರ್ಜುನ್ ಹಾಗೂ ಜಮೀರ್ ಅಹ್ಮದ್ ಖಾನ್ ನಡುವೆ ಉಂಟಾದ ಭಿನ್ನಮತವು ಇನ್ನೂ ಶಮನಗೊಂಡಿಲ್ಲ. ಮಲ್ಲಿಕಾರ್ಜುನ್ ಅವರ ಕೆಲವು ಹೇಳಿಕೆಗಳಿಂದ ಅಸಮಾಧಾನಗೊಂಡಿರುವ ಜಮೀರ್, ಕೇರಳ ಚುನಾವಣೆಯ ನೆಪವೊಡ್ಡಿ ದಾವಣಗೆರೆ ಪ್ರಚಾರದಿಂದ ದೂರ ಉಳಿದಿದ್ದಾರೆ. ಸಮುದಾಯದ ಮುಖಂಡರ ಒತ್ತಾಯದ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಏಪ್ರಿಲ್ 5ರಂದು ಒಂದು ದಿನದ ಮಟ್ಟಿಗೆ ಪ್ರಚಾರಕ್ಕೆ ಬರಲು ಜಮೀರ್ ಒಪ್ಪಿದ್ದಾರೆ. ಕಾಂಗ್ರೆಸ್‌ನ ಈ ಆಂತರಿಕ ಅಸಮಾಧಾನವು ಚುನಾವಣೆಯಲ್ಲಿ ಹಿನ್ನಡೆಯಾಗಿ ಪರಿಣಮಿಸಿ ಬಿಜೆಪಿಗೆ ವರದಾನವಾಗಲಿದೆಯೇ ಎಂಬ ಚರ್ಚೆಗಳು ಜಿಲ್ಲೆಯಲ್ಲಿ ತೀವ್ರವಾಗಿವೆ.

Comments (0)

Your email address will not be published. Required fields are marked *

Back to top button