bengaluru

ಬೆಂಗಳೂರಲ್ಲಿ ಆಲಿಕಲ್ಲು ಮಳೆ ಆರ್ಭಟ; 20ಕ್ಕೂ ಹೆಚ್ಚು ವಿಮಾನಗಳ ಮಾರ್ಗ ಬದಲಾವಣೆ!

ಬೆಂಗಳೂರು: ಸುಡುತ್ತಿದ್ದ ಬಿಸಿಲಿನ ಬೇಗೆಗೆ ಬ್ರೇಕ್ ಬಿದ್ದಿದ್ದು, ವರುಣನ ಅನಿರೀಕ್ಷಿತ ಆಗಮನದಿಂದ ರಾಜಧಾನಿ ತಂಪಾಗಿದೆ. ಮಾರ್ಚ್ 17 ರಂದು ಆರಂಭವಾದ ವರ್ಷದ ಮೊದಲ ಮಳೆ, ಮಾರ್ಚ್ 18 ರಂದು ಆಲಿಕಲ್ಲು ಸಹಿತ ಭಾರಿ ಮಳೆಯಾಗಿ ರೂಪಾಂತರಗೊಂಡಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ನಾಲ್ಕು ದಿನಗಳ ಕಾಲ ನಗರದಲ್ಲಿ ಮಳೆ ಮುಂದುವರಿಯಲಿದ್ದು, ಸದ್ಯಕ್ಕೆ ವರುಣನ ಆರ್ಭಟ ಜೋರಾಗಿದೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ಗ್ರಾಮಾಂತರದ ದೇವನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿದ ಭಾರಿ ಆಲಿಕಲ್ಲು ಮಳೆಯು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.

ಈ ಭಾರಿ ಮಳೆಯ ನೇರ ಪರಿಣಾಮ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಮೇಲೆ ಬೀರಿದೆ. ಧಾರಾಕಾರ ಮಳೆಯಿಂದಾಗಿ ರನ್‌ವೇ ದೃಶ್ಯ ಗೋಚರತೆ ಕಡಿಮೆ ಇರುವುದು ಮತ್ತು ಏರ್ ಟ್ರಾಫಿಕ್ ಸಮಸ್ಯೆಯಿಂದಾಗಿ ಬೆಂಗಳೂರಿಗೆ ಆಗಮಿಸಬೇಕಿದ್ದ 20ಕ್ಕೂ ಹೆಚ್ಚು ವಿಮಾನಗಳನ್ನು ಬೇರೆ ನಗರಗಳಿಗೆ ಡೈವರ್ಟ್ ಮಾಡಲಾಗಿದೆ. ದೆಹಲಿ ಸೇರಿದಂತೆ ವಿವಿಧ ಕಡೆಗಳಿಂದ ಬರುತ್ತಿದ್ದ ವಿಮಾನಗಳನ್ನು ಪಕ್ಕದ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ರವಾನಿಸಲಾಗಿದೆ.

ವಿಮಾನಗಳ ಮಾರ್ಗ ಬದಲಾವಣೆಯ ಪಟ್ಟಿಯಲ್ಲಿ ದೆಹಲಿಯಿಂದ ಬರಬೇಕಿದ್ದ 15ಕ್ಕೂ ಹೆಚ್ಚು ವಿಮಾನಗಳು ಸೇರಿದ್ದು, ಇವುಗಳನ್ನು ಚೆನ್ನೈ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಗಿದೆ. ಇನ್ನುಳಿದಂತೆ ಮಂಗಳೂರು, ಗುವಾಹಟಿ, ಪುಕೆಟ್, ಪಾಟ್ನಾ, ಲಕ್ನೋ, ಚಂಡಿಗಢ ಮತ್ತು ಕೊಚ್ಚಿಯಂತಹ ನಗರಗಳಿಂದ ಬರಬೇಕಿದ್ದ ವಿಮಾನಗಳೂ ಸಹ ವಿಳಂಬ ಅಥವಾ ಮಾರ್ಗ ಬದಲಾವಣೆ ಅನುಭವಿಸಿವೆ. ಸುಮಾರು 30ಕ್ಕೂ ಹೆಚ್ಚು ವಿಮಾನಗಳ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಂತಾಗಿದೆ.

ನಗರದ ಒಳಭಾಗದಲ್ಲಿಯೂ ಮಳೆಯ ಆರ್ಭಟಕ್ಕೆ ಜನರು ಪರದಾಡುತ್ತಿದ್ದಾರೆ. ಹೆದ್ದಾರಿಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇವನಹಳ್ಳಿ ಭಾಗದಲ್ಲಿ ಆಲಿಕಲ್ಲು ಮಳೆಯಿಂದಾಗಿ ರಸ್ತೆಗಳೆಲ್ಲವೂ ಬಿಳಿ ಹರಳುಗಳಿಂದ ತುಂಬಿ ಹೋಗಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಬಿಸಿಲಿನಿಂದ ಹೈರಾಣಾಗಿದ್ದ ಜನರಿಗೆ ಈ ಮಳೆ ತಾತ್ಕಾಲಿಕ ನೆಮ್ಮದಿ ತಂದಿದ್ದರೂ, ಮೂಲಸೌಕರ್ಯ ಮತ್ತು ಸಂಚಾರ ವ್ಯವಸ್ಥೆಯ ಮೇಲಿನ ಹೊಡೆತ ಸಾರ್ವಜನಿಕರಿಗೆ ತಲೆನೋವಾಗಿ ಪರಿಣಮಿಸಿದೆ.
ಮುಂದಿನ ಮೂರು-ನಾಲ್ಕು ದಿನಗಳ ಕಾಲ ಇದೇ ರೀತಿಯ ಹವಾಮಾನ ಇರಲಿರುವುದರಿಂದ ಸಂಜೆ ವೇಳೆಗೆ ಪ್ರಯಾಣ ಬೆಳೆಸುವವರು ಎಚ್ಚರಿಕೆ ವಹಿಸುವುದು ಸೂಕ್ತ.

Comments (0)

Your email address will not be published. Required fields are marked *

Back to top button