ಅಡುಗೆಗೆ ಸೀಮೆಎಣ್ಣೆ ಬಳಸಲು ಕೇಂದ್ರದ ಅನುಮತಿ; ಸಿಲಿಂಡರ್ ಅಭಾವ ನೀಗಿಸಲು ಮಾಸ್ಟರ್ ಪ್ಲಾನ್!

ದೇಶಾದ್ಯಂತ ಎದುರಾಗಿರುವ ಅಡುಗೆ ಅನಿಲ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರ ಬೃಹತ್ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆಗಳನ್ನು ಜಾರಿಗೆ ತರುತ್ತಿದೆ. ಸಿಲಿಂಡರ್ ಅಭಾವದ ಹಿನ್ನೆಲೆ ಅಡುಗೆ ಮಾಡಲು ಪರ್ಯಾಯವಾಗಿ ‘ಸೀಮೆಎಣ್ಣೆ’ ಬಿಡುಗಡೆ ಮಾಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇದರೊಂದಿಗೆ, ಲಭ್ಯವಿರುವ ವಾಣಿಜ್ಯ ಬಳಕೆಯ ಸಿಲಿಂಡರ್‌ಗಳನ್ನು ಆದ್ಯತೆಯ ಮೇರೆಗೆ ವಿತರಿಸಲು ನಿರ್ಧರಿಸಲಾಗಿದ್ದು, ಈ ವಿತರಣೆಯ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಡಲಾಗಿದೆ.

ಭಾರತವು ತನ್ನ ಒಟ್ಟು ಎಲ್‌ಪಿಜಿ ಅಗತ್ಯದ ಶೇಕಡಾ 60 ರಷ್ಟನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದು, ಇದರಲ್ಲಿ ಶೇಕಡಾ 90 ರಷ್ಟು ಪಾಲು ಗಲ್ಫ್ ರಾಷ್ಟ್ರಗಳ ‘ಹೊರ್ಮುಜ್ ಜಲಸಂಧಿ’ ಮಾರ್ಗದ ಮೂಲಕವೇ ಪೂರೈಕೆಯಾಗುತ್ತಿತ್ತು. ಆದರೆ ಪ್ರಸ್ತುತ ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಈ ಮಾರ್ಗದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಭಾರತ ನಿರ್ಧರಿಸಿದೆ. ಹೊರ್ಮುಜ್ ಜಲಸಂಧಿಯನ್ನು ಬಳಸದ ಅಮೆರಿಕಾ, ರಷ್ಯಾ ಮತ್ತು ಅಲ್ಜೀರಿಯಾದಂತಹ ರಾಷ್ಟ್ರಗಳಿಂದ ನೇರವಾಗಿ ಅನಿಲ ಖರೀದಿಸಲು ಕೇಂದ್ರ ಸರ್ಕಾರ ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ.

ಭವಿಷ್ಯದಲ್ಲಿ ಇಂಧನ ಭದ್ರತೆಯನ್ನು ಖಾತರಿಪಡಿಸಿಕೊಳ್ಳಲು ಭಾರತವು ತನ್ನ ಆಮದು ಮೂಲಗಳನ್ನು ವಿಸ್ತರಿಸಿದೆ. ಈ ಮೊದಲು ಕೇವಲ 27 ದೇಶಗಳಿಂದ ಕಚ್ಚಾತೈಲ ಮತ್ತು ಎಲ್‌ಪಿಜಿ ಖರೀದಿಸುತ್ತಿದ್ದ ಭಾರತ, ಈಗ ತನ್ನ ವ್ಯಾಪ್ತಿಯನ್ನು 40 ದೇಶಗಳಿಗೆ ಏರಿಸಿದೆ. ಈ ಕಾರ್ಯತಂತ್ರದ ಮೂಲಕ ಇಂಧನ ಕೊರತೆಯನ್ನು ಶಾಶ್ವತವಾಗಿ ನೀಗಿಸಲು ಮತ್ತು ಜಾಗತಿಕ ಬಿಕ್ಕಟ್ಟುಗಳ ಸಂದರ್ಭದಲ್ಲಿ ದೇಶದ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಾಸ್ಟರ್ ಪ್ಲಾನ್ ರೂಪಿಸಿದೆ.




