ಯುದ್ಧಕ್ಕೆ ಮತ್ತೊಬ್ಬ ಭಾರತೀಯ ನಾವಿಕ ಬಲಿ; ಅಮೇರಿಕಾ ತೈಲ ಟ್ಯಾಂಕರ್ ಮೇಲೆ ಭೀಕರ ದಾಳಿ!

ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವಿನ ಸಂಘರ್ಷಕ್ಕೆ ಮತ್ತೊಬ್ಬ ಭಾರತೀಯ ನಾವಿಕ ಬಲಿಯಾಗಿದ್ದಾರೆ. ಇರಾಕ್ನ ಬಸ್ರಾ ಸಮೀಪ ಅಮೆರಿಕ ಮಾಲೀಕತ್ವದ ‘ಸೇಫ್ಸೀ ವಿಷ್ಣು’ ಎಂಬ ಕಚ್ಚಾ ತೈಲ ಟ್ಯಾಂಕರ್ ಮೇಲೆ ನಡೆದ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಸಾವನ್ನಪ್ಪಿದ್ದಾರೆ ಎಂದು ಇರಾಕ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ.
ಮಾರ್ಷಲ್ ದ್ವೀಪಗಳ ಧ್ವಜದಡಿ ಸಂಚರಿಸುತ್ತಿದ್ದ ಈ ಹಡಗಿನಲ್ಲಿ ಒಟ್ಟು 16 ಮಂದಿ ಭಾರತೀಯ ಸಿಬ್ಬಂದಿಗಳಿದ್ದರು.ದಾಳಿಯ ನಂತರ ಹಡಗಿನಲ್ಲಿದ್ದ ಉಳಿದ 15 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಸ್ರಾ ತೈಲ ಟರ್ಮಿನಲ್ ಬಳಿ ಲಂಗರು ಹಾಕಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದ್ದು, ಭಾರತೀಯ ರಾಯಭಾರ ಕಚೇರಿಯು ಇರಾಕ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಮೃತ ನಾವಿಕನ ಕುಟುಂಬಕ್ಕೆ ರಾಯಭಾರ ಕಚೇರಿಯು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ಕುರಿತು ಮಾಹಿತಿ ನೀಡಿ, ನಡೆಯುತ್ತಿರುವ ಪಶ್ಚಿಮ ಏಷ್ಯಾ ಯುದ್ಧದಲ್ಲಿ ಈವರೆಗೆ ಮೂವರು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಒಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ವ್ಯಾಪಾರಿ ಹಡಗುಗಳ ಮೇಲೆ ನಡೆಯುತ್ತಿರುವ ಸರಣಿ ದಾಳಿಗಳು ಸಮುದ್ರ ಮಾರ್ಗದ ಭದ್ರತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ಮೂಡಿಸಿವೆ.ಕೇಂದ್ರ ಸರ್ಕಾರವು ಯುದ್ಧ ಪೀಡಿತ ಪ್ರದೇಶಗಳಲ್ಲಿರುವ ಭಾರತೀಯರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಭಾಗದಲ್ಲಿ ಸಂಚರಿಸುವ ಹಡಗುಗಳಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆಗಳನ್ನು ನೀಡಲಾಗಿದೆ.




