ಜಿಲ್ಲೆದೇಶ/ವಿದೇಶಸುದ್ದಿ

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್; ಸೌದಿ ಅರೇಬಿಯಾದಲ್ಲಿ ಉತ್ತರ ಕರ್ನಾಟಕದ 23 ಉಮ್ರಾ ಯಾತ್ರಿಕರು ಲಾಕ್!

ಮಧ್ಯಪ್ರಾಚ್ಯದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಭುಗಿಲೆದ್ದಿರುವ ರಣಭೀಕರ ಯುದ್ಧದ ಕಿಚ್ಚು ಈಗ ಉತ್ತರ ಕರ್ನಾಟಕದ ಯಾತ್ರಿಕರ ಮೇಲೆ ನೇರ ಪರಿಣಾಮ ಬೀರಿದೆ. ಉಮ್ರಾ ಯಾತ್ರೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಉತ್ತರ ಕರ್ನಾಟಕದ ಸುಮಾರು 23 ಯಾತ್ರಿಕರು ಯುದ್ಧದ ಹಿನ್ನೆಲೆಯಲ್ಲಿ ಅಲ್ಲಿಯೇ ಸಿಲುಕಿಕೊಂಡಿದ್ದು ತಾಯ್ನಾಡಿಗೆ ಮರಳಲಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಫೆಬ್ರವರಿ 8ರಂದು ಈ ಯಾತ್ರಿಕರು ಭಾರತದಿಂದ ಸೌದಿ ಅರೇಬಿಯಾಕ್ಕೆ ಪ್ರಯಾಣ ಬೆಳೆಸಿದ್ದರು. ಆದರೆ, ಇರಾನ್ ಮತ್ತು ಇಸ್ರೇಲ್ ನಡುವೆ ಕ್ಷಿಪಣಿ ದಾಳಿಗಳು ಆರಂಭವಾಗಿ, ವಿಮಾನಯಾನ ಸೇವೆಗಳಲ್ಲಿ ವ್ಯತ್ಯಯ ಉಂಟಾದ ಕಾರಣ ಇವರು ಕಳೆದ 7 ದಿನಗಳಿಂದ ಮದಿನಾದಲ್ಲಿಯೇ ಉಳಿದುಕೊಳ್ಳುವಂತಾಗಿದೆ.

ಈ ಯಾತ್ರಿಕರ ಗುಂಪಿನಲ್ಲಿ ಧಾರವಾಡ, ಬೆಳಗಾವಿ, ಹುಬ್ಬಳ್ಳಿ ಮತ್ತು ಬಳ್ಳಾರಿ ಜಿಲ್ಲೆಗಳ ನಿವಾಸಿಗಳಿದ್ದಾರೆ. ಯುದ್ಧದ ಭೀತಿಯಿಂದಾಗಿ ವಿಮಾನ ನಿಲ್ದಾಣಗಳು ಮತ್ತು ವಾಯುಪ್ರದೇಶಗಳು ಮುಚ್ಚಲ್ಪಟ್ಟಿರುವುದು ಇವರ ಆತಂಕಕ್ಕೆ ಕಾರಣವಾಗಿದೆ. ಈಗಾಗಲೇ ನಿಗದಿಯಾಗಿದ್ದ ವಿಮಾನಗಳು ರದ್ದಾಗಿದ್ದು, ವಿದೇಶಿ ನೆಲದಲ್ಲಿ ಅನಿಶ್ಚಿತತೆಯ ನಡುವೆ ಕಾಲ ಕಳೆಯುತ್ತಿದ್ದಾರೆ.ಯಾತ್ರಿಕರು ಸುರಕ್ಷಿತವಾಗಿದ್ದರೂ, ಯುದ್ಧದ ತೀವ್ರತೆ ಹೆಚ್ಚುತ್ತಿರುವುದರಿಂದ ಅವರ ಕುಟುಂಬ ಸದಸ್ಯರಲ್ಲಿ ಆತಂಕ ಮನೆಮಾಡಿದೆ. ಕೂಡಲೇ ಭಾರತ ಸರ್ಕಾರ ಮತ್ತು ವಿದೇಶಾಂಗ ಇಲಾಖೆ ಮಧ್ಯಪ್ರವೇಶಿಸಿ, ಸುರಕ್ಷಿತವಾಗಿ ಇವರನ್ನು ತಾಯ್ನಾಡಿಗೆ ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿಕರು ಮನವಿ ಮಾಡಿದ್ದಾರೆ.

Comments (0)

Your email address will not be published. Required fields are marked *

Back to top button