Top Newsಜಿಲ್ಲೆಸುದ್ದಿ

ಓದಬೇಡ ಎಂದು ಪರೀಕ್ಷೆ ಬರೆದು ಬಂದ ಸೊಸೆಯ ಮೇಲೆ ಮಾವನ ಅಟ್ಯಾಕ್!

ಮೈಸೂರು: ನಂಜನಗೂಡಿನಲ್ಲಿ ಶಿಕ್ಷಣದ ಮೇಲಿನ ಅಸೂಯೆಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೇಲೆ ಆಕೆಯ ಸೋದರ ಮಾವನೇ ಬರ್ಬರ ದಾಳಿ ನಡೆಸಿದ ಘೋರ ಘಟನೆ ನಡೆದಿದೆ. ಓದಿ ಎಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುತ್ತಾಳೋ ಎಂಬ ಸಂಕುಚಿತ ಮನೋಭಾವ ಹಾಗೂ ಹಳೇ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಪರೀಕ್ಷೆ ಬರೆದು ಮನೆಗೆ ಮರಳಿದ್ದ ವಿದ್ಯಾರ್ಥಿನಿ ಪೂರ್ಣಿಮಾ ಮೇಲೆ ಕಿರಾತಕ ಮಾವ ಸೋಮಣ್ಣ ಮತ್ತು ಆತನ ತಂಡ ದೊಣ್ಣೆಗಳಿಂದ ಏಕಾಏಕಿ ದಾಳಿ ನಡೆಸಿದೆ.

ಪರೀಕ್ಷೆಯ ಸಮಯದಲ್ಲಿ ಪೆನ್ನು ಹಿಡಿಯಬೇಕಾದ ಕೈಗೆ ಪೆಟ್ಟು ನೀಡುವ ಮೂಲಕ ಯುವತಿಯ ವಿದ್ಯಾಭ್ಯಾಸಕ್ಕೆ ಅಡ್ಡಿಪಡಿಸುವ ಕ್ರೂರ ಪ್ರಯತ್ನ ಇದಾಗಿದೆ. ಈ ದಾಳಿಯ ಸಂದರ್ಭದಲ್ಲಿ ಅಡ್ಡ ಬಂದ ಕುಟುಂಬಸ್ಥರ ಮೇಲೂ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಪೂರ್ಣಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪರೀಕ್ಷೆಯ ಹೊತ್ತಲ್ಲೇ ಇಂತಹ ಘಟನೆ ನಡೆದಿರುವುದು ಗ್ರಾಮಸ್ಥರಲ್ಲಿ ಆಕ್ರೋಶ ಮೂಡಿಸಿದೆ.

ಘಟನೆಗೆ ಸಂಬಂಧಿಸಿದಂತೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸೋಮಣ್ಣ ಸೇರಿದಂತೆ ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಶಿಕ್ಷಣದ ಹಕ್ಕನ್ನು ಕಸಿಯಲು ಯತ್ನಿಸಿದ ಆರೋಪಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ದ್ವೇಷ ತೀರಿಸಿಕೊಳ್ಳಲು ಪರೀಕ್ಷೆಯ ಸಮಯವನ್ನೇ ಬಳಸಿಕೊಂಡ ಈ ಕಿರಾತಕ ಮಾವನ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Comments (0)

Your email address will not be published. Required fields are marked *

Back to top button