ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಶ್ರೀರಂಗಪಟ್ಟಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ತಮ್ಮ ರಾಜಕೀಯ ಭವಿಷ್ಯದ ಬೃಹತ್ ಯೋಜನೆಗಳನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ತೆರಿಗೆ ನೀತಿಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೂರಿದ ಅವರು, ತಾನು ಮುಖ್ಯಮಂತ್ರಿಯಾಗಿದ್ದರೆ ಎಂದಿಗೂ ಜನಸಾಮಾನ್ಯರ ಮೇಲೆ ತೆರಿಗೆಯ ಹೊರೆ ಹೊರಿಸುತ್ತಿರಲಿಲ್ಲ ತಾನು ಸಿಎಂ ಸ್ಥಾನದಲ್ಲಿದ್ದರೆ ಮಹಿಳೆಯರಿಗೆ ತಿಂಗಳಿಗೆ ಐದು ಸಾವಿರ ರೂಪಾಯಿಗಳನ್ನು ನೀಡುತ್ತಿದ್ದೆ ಎನ್ನುವ ಮೂಲಕ ಹೊಸ ಸಂಚಲನ ಮೂಡಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಕುಮಾರಸ್ವಾಮಿ ಮದ್ಯದ ಬೆಲೆ ಏರಿಕೆ ಮತ್ತು ವಿದ್ಯುತ್ ದರ ಹೆಚ್ಚಳದ ಕ್ರಮಗಳನ್ನು ಕಟುವಾಗಿ ವಿಮರ್ಶಿಸಿದರು. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ರಾಜ್ಯದ ಜನರು ಭ್ರಮನಿರಸನರಾಗಿದ್ದು, ಈ ಜನವಿರೋಧಿ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಲು ತಾನು ಪಣ ತೊಟ್ಟಿರುವುದಾಗಿ ಘೋಷಿಸಿದರು. ಮದ್ಯ ಮತ್ತು ವಿದ್ಯುತ್ ಮೂಲಗಳಿಂದ ಹಣ ಸಂಗ್ರಹಿಸುತ್ತಿರುವ ಸರ್ಕಾರದ ನೀತಿಯು ಸಾಮಾನ್ಯ ಜನರ ಬದುಕನ್ನು ಹೈರಾಣಾಗಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ತಮಗೆ ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದ ಅಧಿಕಾರ ಸಿಕ್ಕರೆ ಶಿಕ್ಷಣ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದಾಗಿ ಭರವಸೆ ನೀಡಿದರು. ಪ್ರಾಥಮಿಕ ಹಂತದಿಂದ ಪಿಯುಸಿ ವರೆಗೂ ಪ್ರತಿಯೊಬ್ಬ ವಿದ್ಯಾರ್ಥಿಗೂ ಸಂಪೂರ್ಣ ಉಚಿತ ಶಿಕ್ಷಣ ನೀಡುವುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು. ಇದರೊಂದಿಗೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಬೆಲೆ ಸಿಗುವಂತೆ ವ್ಯವಸ್ಥೆ ಮಾಡುವುದಾಗಿ ಹೇಳಿದ ಅವರು, ರೈತರ ಬಗೆಗಿನ ತಮ್ಮ ಕಾಳಜಿಯು ಪ್ರಶ್ನಾತೀತವಾಗಿದ್ದು, ಅನ್ನದಾತರ ಹಿತಕ್ಕಾಗಿ ನಿರಂತರವಾಗಿ ಶ್ರಮಿಸುವುದಾಗಿ ಹೇಳಿದ್ದಾರೆ.


