Top Newsಜಿಲ್ಲೆರಾಜಕೀಯರಾಜ್ಯಸುದ್ದಿ

ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ಬಿ.ವೈ. ವಿಜಯೇಂದ್ರ ಕೆಂಡ!

ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರವಾಗಿ ಖಂಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಇದು ಪ್ರಜಾಪ್ರಭುತ್ವ ವಿರೋಧಿ ನಡೆ. ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣದ ಕಾಯ್ದೆ ತಂದಾಗಲೇ ಕಾಂಗ್ರೆಸ್‌ನ ಅಸಹಿಷ್ಣುತೆ ಬಯಲಾಗಿತ್ತು. ಈಗ ಮಾಧ್ಯಮಗಳ ಹಕ್ಕನ್ನು ಕಸಿಯುವ ಮೂಲಕ ಪ್ರಜಾಪ್ರಭುತ್ವವನ್ನು ಅಣಕಿಸಲಾಗುತ್ತಿದೆ” ಎಂದು ಕಿಡಿಕಾರಿದರು.

ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ವಿಜಯೇಂದ್ರ, “ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದವರಿಗೆ ಪುರಾವೆ ಇಲ್ಲ ಎಂದು ಸಮರ್ಥಿಸಿಕೊಂಡ ಸರ್ಕಾರವಿದು. ದೇಶದ್ರೋಹಿ ಘೋಷಣೆಗಳನ್ನು ತಡೆಯಲು ಸಾಧ್ಯವಾಗದ ಇಂತಹ ಅಯೋಗ್ಯ ಸರ್ಕಾರಕ್ಕೆ ಈಗ ಪತ್ರಕರ್ತರನ್ನು ಕಂಡರೆ ಭಯವೇಕೆ?” ಎಂಅವರು ಬಣ್ಣಿಸಿದರು.

ಸಚಿವರ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಕಳ್ಳತನದ ಘಟನೆಯನ್ನು ನೆಪವಾಗಿಟ್ಟುಕೊಂಡು ಮಾಧ್ಯಮಗಳಿಗೆ ನಿರ್ಬಂಧ ಹೇರಿರುವುದನ್ನು ಅವರು ತರಾಟೆಗೆ ತೆಗೆದುಕೊಂಡರು. “ಸಚಿವರ ಕಚೇರಿಗಳಲ್ಲಿ ಕಳ್ಳತನ ನಡೆದರೆ ಅದು ಸರ್ಕಾರದ ವೈಫಲ್ಯ. ಅದನ್ನು ಸರಿಪಡಿಸಿಕೊಳ್ಳುವ ಬದಲು ಮಾಧ್ಯಮಗಳ ಪ್ರವೇಶ ತಡೆಯುವುದು ಹಗರಣಗಳನ್ನು ಮುಚ್ಚಿಡುವ ಹತಾಶ ಪ್ರಯತ್ನ. ಇದನ್ನು ಬಿಜೆಪಿ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ” ಎಂದು ವಿಜಯೇಂದ್ರ ಆಕ್ರೋಶ ಹೊರಹಾಕಿದರು.

ಸರ್ಕಾರದ ಭ್ರಷ್ಟಾಚಾರ, ಕಮಿಷನ್ ದಂಧೆ ಮತ್ತು ವರ್ಗಾವಣೆ ಅಕ್ರಮಗಳು ಮಾಧ್ಯಮಗಳ ಮೂಲಕ ಜನರಿಗೆ ತಲುಪುತ್ತವೆ ಎಂಬ ಆತಂಕ ಸಿದ್ದರಾಮಯ್ಯ ಸರ್ಕಾರಕ್ಕೆ ಕಾಡುತ್ತಿದೆ. ಹೀಗಾಗಿಯೇ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಟೀಕಿಸಿದರು. ಈ ನಿರ್ಧಾರವನ್ನು ಕೂಡಲೇ ಹಿಂಪಡೆಯದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು.

Comments (0)

Your email address will not be published. Required fields are marked *

Back to top button