Sunday, February 15, 2026
29.6 C
Bengaluru
Google search engine
LIVE
ಮನೆದೇಶ/ವಿದೇಶವಿದೇಶದಲ್ಲಿ ಮೌನವಾಯ್ತು ಮತ್ತೊಂದು ಕನ್ನಡಿಗನ ಜೀವ…!

ವಿದೇಶದಲ್ಲಿ ಮೌನವಾಯ್ತು ಮತ್ತೊಂದು ಕನ್ನಡಿಗನ ಜೀವ…!

ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಿ ಆರು ದಿನಗಳಿಂದ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ಪ್ರತಿಭಾವಂತ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ (22) ಶವವಾಗಿ ಪತ್ತೆಯಾಗಿದ್ದಾರೆ. ಈ ಘಟನೆಯು ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಕುಟುಂಬಗಳಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಸಾಕೇತ್ ಶ್ರೀನಿವಾಸಯ್ಯ ಅವರು ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು.

ಫೆಬ್ರವರಿ 9 ರಂದು ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಸಾಕೇತ್ ಅವರನ್ನು ಕೊನೆಯ ಬಾರಿಗೆ ನೋಡಲಾಗಿತ್ತು. ಅಂದಿನಿಂದ ನಾಪತ್ತೆಯಾಗಿದ್ದ ಅವರ ಪತ್ತೆಗಾಗಿ ಲೇಕ್ ಅಂಜಾ ಮತ್ತು ಬರ್ಕ್ಲಿ ಬೆಟ್ಟಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಶೋಧದ ವೇಳೆ ಟಿಲ್ಡೆನ್ ಪ್ರಾದೇಶಿಕ ಉದ್ಯಾನವನದ ಬಳಿ ಸಾಕೇತ್ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಇದ್ದ ಬ್ಯಾಗ್ ಪತ್ತೆಯಾಗಿತ್ತು,

ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ದೂತಾವಾಸವು ಸಾಕೇತ್ ಅವರ ಮೃತದೇಹ ಪತ್ತೆಯಾಗಿರುವುದನ್ನು ಅಧಿಕೃತವಾಗಿ ದೃಢಪಡಿಸಿದೆ. ಮೃತದೇಹವನ್ನು ಭಾರತಕ್ಕೆ ತ್ವರಿತವಾಗಿ ತಲುಪಿಸಲು ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ದೂತಾವಾಸ ತಿಳಿಸಿದೆ. ಸಾಕೇತ್ ಅವರು ಈ ಹಿಂದೆ ಐಐಟಿ ಮದ್ರಾಸ್‌ನಲ್ಲಿ ಅಧ್ಯಯನ ಮಾಡಿದ್ದರು ಮತ್ತು ಹೈಪರ್‌ಲೂಪ್ ತಂತ್ರಜ್ಞಾನದ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ಉದಯೋನ್ಮುಖ ವಿಜ್ಞಾನಿಯಾಗಿದ್ದರು.

ಈ ದುರಂತ ಘಟನೆಯು ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಲೋಕಸಭೆಯಲ್ಲೂ ಚರ್ಚೆಯಾಗುವಂತೆ ಮಾಡಿದೆ. ವಿದೇಶಾಂಗ ಸಚಿವಾಲಯವು ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುತ್ತಿರುವುದಾಗಿ ತಿಳಿಸಿದ್ದರೂ, ಇಂತಹ ಸರಣಿ ಘಟನೆಗಳು ಪೋಷಕರಲ್ಲಿ ಭಯ ಹುಟ್ಟಿಸಿವೆ. ಸಾಕೇತ್ ಅವರ ಸಾವು ಅಪಘಾತವೋ ಅಥವಾ ಯಾವುದಾದರೂ ಒತ್ತಡದ ಪರಿಣಾಮವೋ ಎಂಬುದು ಪೊಲೀಸರ ಪೂರ್ಣ ತನಿಖೆಯ ನಂತರವಷ್ಟೇ ತಿಳಿದುಬರಬೇಕಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments