Saturday, February 14, 2026
28.4 C
Bengaluru
Google search engine
LIVE
ಮನೆ#Exclusive NewsTop Newsಸಿಎಂ ಸ್ಥಾನದ ಚರ್ಚೆಗೆ ಕುಮಾರಸ್ವಾಮಿ ಬ್ರೇಕ್!

ಸಿಎಂ ಸ್ಥಾನದ ಚರ್ಚೆಗೆ ಕುಮಾರಸ್ವಾಮಿ ಬ್ರೇಕ್!

ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಈ “ಭ್ರಷ್ಟ ಮತ್ತು ಕೆಟ್ಟ” ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದೇ ತಮ್ಮ ಏಕೈಕ ಅಜೆಂಡಾ ಎಂದು ಘೋಷಿಸಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರೇ ಮುಂದಿನ ಸಿಎಂ ಆಗಲಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ. ರಾಜ್ಯದಲ್ಲಿ ಜನಪರವಾದ ‘ಜನತಾ ಸರ್ಕಾರ’ ಬರಬೇಕು ಎಂಬುದು ನನ್ನ ಆಶಯವೇ ಹೊರತು, ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಯುವ ಅಗತ್ಯವಿಲ್ಲ ಎಂದು ಉತ್ತರಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಮಾತನಾಡಿದ ಕುಮಾರಸ್ವಾಮಿ, ಈವರೆಗೂ ಮೈತ್ರಿ ಬಗ್ಗೆ ಯಾವುದೇ ಅಧಿಕೃತ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು. ಮೈತ್ರಿ ವಿಷಯದಲ್ಲಿ ತಾವು ಮುಕ್ತವಾಗಿದ್ದು, ಗೊಂದಲಗಳಿಗೆ ಅವಕಾಶ ನೀಡಬಾರದು ಎಂಬುದು ತಮ್ಮ ನಿಲುವು ಎಂದರು. ಮಂಡ್ಯ ಮತ್ತು ಹಾಸನ ಭಾಗದ ಕೆಲವು ಬಿಜೆಪಿ ನಾಯಕರು ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈಯಕ್ತಿಕ ಹೇಳಿಕೆಗಳಿಗೆ ತಾವು ಪ್ರಾಮುಖ್ಯತೆ ನೀಡುವುದಿಲ್ಲ ಮತ್ತು ಅಂತಹ ಟೀಕೆಗಳಿಗೆ ಉತ್ತರಿಸುವುದು ಅನಗತ್ಯ ಎಂದು ಮಾಜಿ ಶಾಸಕರಾದ ಪ್ರೀತಂಗೌಡ ಮತ್ತು ನಾರಾಯಣಗೌಡ ಅವರಿಗೆ ತಿರುಗೇಟು ನೀಡಿದರು.

ಕಾಂಗ್ರೆಸ್ ಶಾಸಕರ ವಿದೇಶಿ ಪ್ರವಾಸದ ಕುರಿತು ಲೇವಡಿ ಮಾಡಿದ ಕುಮಾರಸ್ವಾಮಿ, ಶಾಸಕರು ರೆಸಾರ್ಟ್ ಅಥವಾ ವಿದೇಶಕ್ಕೆ ಎಲ್ಲಿಗಾದರೂ ಹೋಗಲಿ, ಆದರೆ ನಾಡಿನ ಜನರ ಸಮಸ್ಯೆಗಳಿಗೆ ಮೊದಲು ಪರಿಹಾರ ನೀಡಲಿ ,ಅಭಿವೃದ್ಧಿಯ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುತ್ತಿದ್ದೇವೆ ಎನ್ನುವವರಿಗೆ ಬೇಡ ಎನ್ನಲು ಸಾಧ್ಯವೇ? ಹೋಗಿ ಬರಲಿ ಎಂದು ವ್ಯಂಗ್ಯವಾಡಿದ ಅವರು, ಸರ್ಕಾರದ ಆದ್ಯತೆ ಜನರ ಕಡೆಗೆ ಇರಲಿ ಎಂದು ಕಿವಿಮಾತು ಹೇಳಿದರು.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments