ವಿಶ್ವವಿಖ್ಯಾತ ಹಂಪಿ ಉತ್ಸವ ಹಿನ್ನೆಲೆಯಲ್ಲಿ ಹಂಪಿಯ ಪವಿತ್ರ ತುಂಗಭದ್ರಾ ನದಿಯ ದಡದಲ್ಲಿ ಅತ್ಯಂತ ಭಕ್ತಿಪೂರ್ವಕವಾಗಿ ‘ತುಂಗಭದ್ರಾ ಆರತಿ’ಯನ್ನು ನೆರವೇರಿಸಲಾಯಿತು. ಹಂಪಿ ಉತ್ಸವದ ಸಡಗರಕ್ಕೆ ಸಾಂಪ್ರದಾಯಿಕ ಮೆರುಗು ನೀಡುವ ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮವು ನೆರೆದಿದ್ದ ಸಹಸ್ರಾರು ಭಕ್ತರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯಿತು. ನದಿಯ ಅಲೆಗಳ ಮೇಲೆ ದೀಪಗಳ ಬೆಳಕು ಪ್ರತಿಫಲಿಸುತ್ತಿದ್ದ ದೃಶ್ಯವು ಹಂಪಿಯ ವೈಭವವನ್ನು ಪುನಃ ನೆನಪಿಸುವಂತಿತ್ತು.

ತುಂಗಭದ್ರಾ ನದಿಯ ದಡದಲ್ಲಿ ಅರ್ಚಕರು ಸಾಲಾಗಿ ನಿಂತು, ವೇದ ಮಂತ್ರಗಳ ಪಠಣ ಮತ್ತು ಶಂಖನಾದದ ನಡುವೆ ಬೃಹತ್ ಕಂಚಿನ ದೀಪಗಳಿಂದ ನದಿಗೆ ಆರತಿಯನ್ನು ಅರ್ಪಿಸಿದರು. ಸಂಜೆಯ ಕತ್ತಲಲ್ಲಿ ಬೆಳಗಿದ ಈ ದೀಪದ ಬೆಳಕು ಇಡೀ ನದಿ ತೀರದಲ್ಲಿ ಭಕ್ತಿಭಾವದ ಪರಾಕಾಷ್ಠೆಯನ್ನು ಮೂಡಿಸಿತ್ತು. ಕಾಶಿಯ ಗಂಗಾ ಆರತಿಯ ಮಾದರಿಯಲ್ಲಿ ನಡೆದ ಈ ಅದ್ಧೂರಿ ಕಾರ್ಯಕ್ರಮವನ್ನು ನೋಡಲು ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರು ಆಗಮಿಸಿ ಅಪರೂಪದ ಕ್ಷಣಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದರು.
ಈ ಧಾರ್ಮಿಕ ಮತ್ತು ಸಾಂಸ್ಕೃತಿಕ ಸೌಂದರ್ಯದ ಸುಧೆಗೆ ಸಾಕ್ಷಿಯಾಗಲು ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್, ಮಾಜಿ ಶಾಸಕ ಭೀಮಾನಾಯ್ಕ್, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ, ಎಸ್‌ಪಿ ಜಾಹ್ನವಿ ಮತ್ತು ಸಿಇಒ ಅಕ್ರಂ ಷಾ ಸೇರಿದಂತೆ ಜಿಲ್ಲಾಡಳಿತದ ಪ್ರಮುಖ ಅಧಿಕಾರಿಗಳು ಭಾಗವಹಿಸಿದ್ದರು. ಹಂಪಿ ಉತ್ಸವದ ಅಂಗವಾಗಿ ನಡೆದ ಈ ತುಂಗಭದ್ರಾ ಆರತಿಯು ಮುಂಬರುವ ಮೂರು ದಿನಗಳ ಅದ್ಧೂರಿ ಕಾರ್ಯಕ್ರಮಗಳಿಗೆ ಯಶಸ್ವಿ ಚಾಲನೆ ನೀಡಿದಂತಾಗಿದೆ.


