Wednesday, February 11, 2026
26.6 C
Bengaluru
Google search engine
LIVE
ಮನೆ#Exclusive NewsTop Newsಬಿಲ್ ಬಿಡುಗಡೆಗೆ ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್; ಎಕ್ಸಿಕ್ಯೂಟಿವ್ ಎಂಜಿನಿಯರ್ ಅರೆಸ್ಟ್

ಬಿಲ್ ಬಿಡುಗಡೆಗೆ ಲಂಚಕ್ಕೆ ಕೈಯೊಡ್ಡಿದ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್; ಎಕ್ಸಿಕ್ಯೂಟಿವ್ ಎಂಜಿನಿಯರ್ ಅರೆಸ್ಟ್

ವಿಜಯನಗರ: ಹೊಸಪೇಟೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಲಸ ಮುಗಿಸಿದ ಗುತ್ತಿಗೆದಾರರಿಂದ ಬಿಲ್ ಬಿಡುಗಡೆ ಮಾಡಲು ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ಇಬ್ಬರು ಪ್ರಮುಖ ಅಧಿಕಾರಿಗಳು ಈಗ ಲೋಕಾಯುಕ್ತರ ವಶದಲ್ಲಿದ್ದಾರೆ.

ಹೂವಿನ ಹಡಗಲಿಯ ಗುತ್ತಿಗೆದಾರರಾದ ಮಹೇಶ್ ಹಲಗೇರಿ ಅವರು ಪಿಡಬ್ಲ್ಯುಡಿ ಇಲಾಖೆಯ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದರು. ಆದರೆ, ಅವರ ಕೆಲಸದ ಹಣವನ್ನು ಬಿಡುಗಡೆ ಮಾಡಲು ಎಕ್ಸಿಕ್ಯೂಟಿವ್ ಎಂಜಿನಿಯರ್ ದೇವದಾಸ್ ಮತ್ತು ಅಕೌಂಟೆಂಟ್ ಮಾರುತಿ ಅವರು 1 ಲಕ್ಷ ರೂ. ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು. ಅಧಿಕಾರಿಗಳ ಕಿರುಕುಳದಿಂದ ಬೇಸತ್ತ ಗುತ್ತಿಗೆದಾರರು ಲೋಕಾಯುಕ್ತ ಪೊಲೀಸರ ಮೊರೆ ಹೋಗಿದ್ದರು.

ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಡಿವೈಎಸ್‌ಪಿ ಸಚಿನ್ ಎಸ್. ಛಲವಾದಿ ನೇತೃತ್ವದ ತಂಡ, ಗುತ್ತಿಗೆದಾರರಿಂದ ಹಣ ಸ್ವೀಕರಿಸುತ್ತಿದ್ದಾಗಲೇ ದೇವದಾಸ್ ಮತ್ತು ಮಾರುತಿ ಅವರನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಈ ದಾಳಿಯಲ್ಲಿ ಪಿಐಗಳಾದ ರಾಜೇಶ್ ಲಮಾಣಿ, ಅಮರೇಶ್ ಹುಬ್ಬಳ್ಳಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಅಧಿಕಾರಿಗಳು ಲಂಚದ ಹಣದೊಂದಿಗೆ ಸಿಕ್ಕಿಬಿದ್ದಿರುವುದು ಇಲಾಖೆಯ ಆಂತರಿಕ ಭ್ರಷ್ಟಾಚಾರವನ್ನು ಬಯಲು ಮಾಡಿದೆ.

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿವೆ. ಕಳೆದ ತಿಂಗಳಷ್ಟೇ ಕಲಬುರಗಿಯಲ್ಲಿ ಜಮೀನು ದಾಖಲೆಗಾಗಿ ಲಂಚ ಪಡೆಯುತ್ತಿದ್ದ ಎಫ್‌ಡಿಎ ಶಶಿಕುಮಾರ್ ಮತ್ತು ಬೆಂಗಳೂರಿನಲ್ಲಿ ಚೀಟಿ ವ್ಯವಹಾರದ ದೂರುದಾರರಿಂದ 4 ಲಕ್ಷ ರೂ. ಪಡೆಯುತ್ತಿದ್ದ ಇನ್ಸ್‌ಪೆಕ್ಟರ್ ಗೋವಿಂದರಾಜು ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದನ್ನು ಇಲ್ಲಿ ಸ್ಮರಿಸಬಹುದು. ನಿರಂತರ ದಾಳಿಗಳು ನಡೆಯುತ್ತಿದ್ದರೂ ಅಧಿಕಾರಿಗಳು ಲಂಚ ಪಡೆಯುವುದನ್ನು ನಿಲ್ಲಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments