Top Newsರಾಜ್ಯವಾಣಿಜ್ಯಸುದ್ದಿ

ರೈತರ ನಂಬಿಕೆಗೆ ಹೊಸ ಮೆರುಗು; ನಂದಿನಿ ಹಾಲು ಉತ್ಪನ್ನಗಳ ರಾಯಭಾರಿಯಾದ ಸುಧಾರಾಣಿ

ಕರ್ನಾಟಕದ ಮನೆಮಾತಾಗಿರುವ ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ಹಿರಿಯ ನಟಿ ಸುಧಾರಾಣಿ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ. ಈ ಕುರಿತು ಬೆಂಗಳೂರು ಮತ್ತು ರಾಮನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಕೆ. ಸುರೇಶ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸುಧಾರಾಣಿ ಅವರನ್ನು ಬಮೂಲ್ ಕುಟುಂಬಕ್ಕೆ ಆತ್ಮೀಯವಾಗಿ ಬರಮಾಡಿಕೊಂಡಿರುವ ಡಿ.ಕೆ. ಸುರೇಶ್, ನಂದಿನಿ ಬ್ರಾಂಡ್ ಕೇವಲ ಉತ್ಪನ್ನವಲ್ಲ, ಅದು ಕೋಟ್ಯಂತರ ಗ್ರಾಹಕರ ನಂಬಿಕೆಯ ಪ್ರತೀಕ ಎಂದು ಬಣ್ಣಿಸಿದ್ದಾರೆ. ನಂದಿನಿ ಸಂಸ್ಥೆಯು ರೈತರ ಹಿತರಕ್ಷಣೆ ಮತ್ತು ಗ್ರಾಹಕರಿಗೆ ಶುದ್ಧ ಹಾಗೂ ಗುಣಮಟ್ಟದ ಪೌಷ್ಟಿಕ ಆಹಾರವನ್ನು ಒದಗಿಸುವಲ್ಲಿ ಹೊಂದಿರುವ ಬದ್ಧತೆಯನ್ನು ಈ ನೇಮಕಾತಿಯು ಇನ್ನಷ್ಟು ಬಲಪಡಿಸಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಸುಧಾರಾಣಿ ಅವರು ನಂದಿನಿ ಉತ್ಪನ್ನಗಳ ಜೊತೆ ಗುರುತಿಸಿಕೊಳ್ಳುತ್ತಿರುವುದು ಗ್ರಾಹಕರಲ್ಲಿ ಹೊಸ ಸಂಚಲನ ಮೂಡಿಸಿದೆ. ರಾಜ್ಯದ ಪ್ರಮುಖ ಹೈನುಗಾರಿಕೆ ಒಕ್ಕೂಟವಾದ ಬಮೂಲ್, ನಟಿಯ ಜನಪ್ರಿಯತೆಯನ್ನು ಬಳಸಿಕೊಂಡು ನಂದಿನಿ ಉತ್ಪನ್ನಗಳನ್ನು ಮನೆಮನೆಗೆ ತಲುಪಿಸುವ ಗುರಿ ಹೊಂದಿದೆ.

Comments (0)

Your email address will not be published. Required fields are marked *

Back to top button