ಜಿಲ್ಲೆರಾಜ್ಯಸುದ್ದಿ

ರೈತರೇ ಎಚ್ಚರ! ಮಾರುಕಟ್ಟೆಯಲ್ಲಿ ನಡೆಯುತ್ತಿದೆ ತೂಕದ ದಂಧೆ

ರೈತ ದೇಶದ ಬೆನ್ನೆಲುಬು ಎಂಬ ಮಾತು ಕೇವಲ ಘೋಷಣೆಗೆ ಸೀಮಿತವಾಗುತ್ತಿದೆಯೇ ಎಂಬ ಅನುಮಾನ ಮೂಡುವಂತೆ ಹಾವೇರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಘಟನೆಯೊಂದು ನಡೆದಿದೆ. ಮಾರುಕಟ್ಟೆಗೆ ಕಡಲೆ ಮಾರಾಟ ಮಾಡಲು ಬಂದಿದ್ದ ರೈತರೊಬ್ಬರಿಗೆ ತೂಕದಲ್ಲಿ ದೊಡ್ಡ ಮಟ್ಟದ ಮೋಸವಾಗಿದ್ದು, ಇದರಿಂದ ರೊಚ್ಚಿಗೆದ್ದ ರೈತ ಮಾರುಕಟ್ಟೆಯಲ್ಲೇ ಅಂಗಡಿ ಮಾಲೀಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಹಾವೇರಿ ತಾಲೂಕಿನ ಬಸವನಕಟ್ಟಿ ಗ್ರಾಮದ ರೈತ ಶರಣಗೌಡ ಪಾಟೀಲ ಅವರು ತಾವು ಬೆಳೆದ ಕಡಲೆಯನ್ನು ಮಾರಾಟ ಮಾಡಲು ನಗರದ ಎಪಿಎಂಸಿ ಮಾರುಕಟ್ಟೆಗೆ ತಂದಿದ್ದರು. ಮುನ್ನೆಚ್ಚರಿಕಾ ಕ್ರಮವಾಗಿ ಅವರು ಮನೆಯಲ್ಲೇ ಚೀಲಗಳನ್ನು ತೂಕ ಮಾಡಿಕೊಂಡು ಬಂದಿದ್ದರು. ಮನೆಯಲ್ಲಿ ತೂಕ ಮಾಡಿದಾಗ ಪ್ರತಿ ಚೀಲವು 56, 57 ಮತ್ತು 58 ಕೆಜಿಯಷ್ಟಿತ್ತು. ಆದರೆ, ಮಾರುಕಟ್ಟೆಯ ಸೋಮಶೇಖರ್ ಎರೆಸೀಮೆ ಎಂಬುವವರ ಅಂಗಡಿಯಲ್ಲಿ ತೂಕ ಮಾಡಿಸಿದಾಗ ಪ್ರತಿ ಚೀಲದಲ್ಲಿ ಸುಮಾರು 3 ರಿಂದ 4 ಕೆಜಿಯಷ್ಟು ವ್ಯತ್ಯಾಸ ಕಂಡುಬಂದಿದೆ. ಇದರಿಂದ ಕಂಗಾಲಾದ ರೈತ, ವ್ಯಾಪಾರಸ್ಥರು ಹೀಗೆ ಬಹಿರಂಗವಾಗಿ ಮೋಸ ಮಾಡಿದರೆ ರೈತರು ಬದುಕುವುದು ಹೇಗೆ ಎಂದು ಕಿಡಿಕಾರಿದ್ದಾರೆ.

ಘಟನೆಯ ನಂತರ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಎಪಿಎಂಸಿ ನಿರ್ದೇಶಕರು ಮತ್ತು ಎಸಿ ಕಲ್ಯಾಣಿ ಅವರು ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ತೂಕದಲ್ಲಿ ವ್ಯತ್ಯಾಸ ಮಾಡಿರುವುದು ದೃಢಪಟ್ಟಿದ್ದು, ನಿಯಮ ಉಲ್ಲಂಘಿಸಿ ರೈತರಿಗೆ ಮೋಸ ಮಾಡಿದ ಅಂಗಡಿಯನ್ನು ಸೀಜ್ ಮಾಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ. ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿದ್ದರೂ ಪರವಾಗಿಲ್ಲ, ಆದರೆ ತೂಕದಲ್ಲೇ ಮೋಸ ಮಾಡುವುದು ಅಕ್ಷಮ್ಯ ಎಂದು ಸ್ಥಳೀಯ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Comments (0)

Your email address will not be published. Required fields are marked *

Back to top button