ಜಿಲ್ಲೆಸುದ್ದಿ

ರೈತರಿಗೆ ಹೆಣ್ಣು ಕೊಟ್ಟರೆ 2 ಲಕ್ಷ ಸಹಾಯಧನ; ಸರ್ಕಾರಕ್ಕೆ ವಿನೂತನ ಬೇಡಿಕೆ!

ಗದಗ: ರಾಜ್ಯದಲ್ಲಿ ರೈತರು ಎದುರಿಸುತ್ತಿರುವ ಕನ್ಯೆ ಸಿಗದ ಗಂಭೀರ ಸಮಸ್ಯೆಯ ಕುರಿತು ನರಗುಂದ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ಸಿದ್ದನಕೊಳ್ಳದ ಡಾ. ಶಿವಕುಮಾರ್ ಸ್ವಾಮೀಜಿ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಕೃಷಿಕರನ್ನು ವಿವಾಹವಾಗಲು ಯುವತಿಯರು ಮತ್ತು ಅವರ ಪೋಷಕರು ಹಿಂದೇಟು ಹಾಕುತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದು ಗ್ರಾಮೀಣ ಭಾಗದ ಯುವಕರಲ್ಲಿ ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ವಿಶೇಷ ಹಾಗೂ ವಿನೂತನ ಬೇಡಿಕೆಯನ್ನು ಮಂಡಿಸಿದ್ದಾರೆ.

ರೈತ ಸಮುದಾಯದ ಯುವಕರ ವಿವಾಹಕ್ಕೆ ಪ್ರೋತ್ಸಾಹ ನೀಡಲು ಯಾವ ಕುಟುಂಬದವರು ರೈತರಿಗೆ ತಮ್ಮ ಮನೆಯ ಹೆಣ್ಣನ್ನು ಕೊಟ್ಟು ಮದುವೆ ಮಾಡುತ್ತಾರೋ, ಅಂತಹವರಿಗೆ ಸರ್ಕಾರ 2 ಲಕ್ಷ ರೂಪಾಯಿಗಳ ಸಹಾಯಧನ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದರು. ಪ್ರತಿಯೊಬ್ಬ ಪೋಷಕರು ಕೂಡ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಸ್ಥ ವರನನ್ನೇ ಹುಡುಕುತ್ತಿರುವುದರಿಂದ, ಕೃಷಿಕ ಯುವಕರು ಅವಿವಾಹಿತರಾಗಿಯೇ ಉಳಿಯುವಂತಾಗಿದೆ. ಈ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಸರ್ಕಾರದ ಆರ್ಥಿಕ ಬೆಂಬಲ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈತರಿಗೆ ಕನ್ಯೆ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತರಾಧಿಕಾರಿಗಳೇ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತ ಯುವಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಶಕ್ತಿ ಸೌಧದಲ್ಲಿ ಕುಳಿತಿರುವ ಜನಪ್ರತಿನಿಧಿಗಳು ಅನ್ನದಾತನ ಈ ವ್ಯಥೆಗೆ ಕಿವಿಗೊಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Comments (0)

Your email address will not be published. Required fields are marked *

Back to top button