ಜಿಲ್ಲೆರಾಜ್ಯಸುದ್ದಿ

ಮದುವೆ ಸಂಭ್ರಮದ ನಡುವೆಯೇ ಮಸಣವಾಯ್ತು ಮನೆ; ತಾಯಿ-ಮಗಳು ಆತ್ಮಹತ್ಯೆ!

ಮಂಡ್ಯ: ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಸಂಭ್ರಮದ ಮದುವೆಯ ಮನೆಯು ಶೋಕ ಸಾಗರದಲ್ಲಿ ಮುಳುಗಿದೆ. ಮದುವೆಗೆ ಸಿದ್ಧತೆ ನಡೆಯುತ್ತಿದ್ದ ನಡುವೆಯೇ ತಾಯಿ ಮತ್ತು ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. 46 ವರ್ಷದ ಶಕುಂತಲಾದೇವಿ ಹಾಗೂ ಅವರ 19 ವರ್ಷದ ಪುತ್ರಿ ಪ್ರಿಯಾಂಕ ಮೃತಪತ್ತಿದ್ದಾರೆ.

ಮೃತ ಯುವತಿ ಪ್ರಿಯಾಂಕಳಿಗೆ ಮದುವೆ ನಿಶ್ಚಯವಾಗಿದ್ದು, ಕುಟುಂಬಸ್ಥರೆಲ್ಲರೂ ವಿವಾಹದ ಸಿದ್ಧತೆಗಳಲ್ಲಿ ಬ್ಯುಸಿಯಾಗಿದ್ದರು. ಆದರೆ, ಈ ಸಂಭ್ರಮದ ವಾತಾವರಣದ ನಡುವೆಯೇ ತಾಯಿ ಮತ್ತು ಮಗಳು ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟುತ್ತಿರುವಾಗಲೇ ಇವರಿಬ್ಬರೂ ಪ್ರಾಣಬಿಟ್ಟಿರುವುದು ಕುಟುಂಬದವರನ್ನು ದಿಕ್ಕೆಡುವಂತೆ ಮಾಡಿದೆ.

ಈ ದುಡುಕಿನ ನಿರ್ಧಾರಕ್ಕೆ ಕಾರಣವೇನು ಎಂಬುದು ಸದ್ಯಕ್ಕೆ ನಿಗೂಢವಾಗಿದ್ದು, ಕುಟುಂಬದ ಆಂತರಿಕ ಕಲಹವೋ ಅಥವಾ ಬೇರೆ ಯಾವುದಾದರೂ ಒತ್ತಡವೋ ಎಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಳವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Comments (0)

Your email address will not be published. Required fields are marked *

Back to top button