ಜಿಲ್ಲೆರಾಜ್ಯಸುದ್ದಿ

ಲಕ್ಕುಂಡಿ ಕೋಡಿ ಬಸವಣ್ಣ ದೇವಸ್ಥಾನದಲ್ಲಿ ಸರ್ಪ ಕಾವಲಿನ ರಹಸ್ಯ ಬಯಲು!

ಗದಗ : ಕಲ್ಯಾಣಿ ಚಾಲುಕ್ಯರ ಗತವೈಭವದ ಸಾಕ್ಷಿಯಾದ ಲಕ್ಕುಂಡಿ ಗ್ರಾಮವು ಈಗ ಮತ್ತೊಂದು ರೋಚಕ ರಹಸ್ಯದಿಂದಾಗಿ ಸುದ್ದಿಯಲ್ಲಿದೆ. ಶಿಲ್ಪಕಲೆಗಳ ತೊಟ್ಟಿಲು ಮತ್ತು ಬಂಗಾರದ ನಾಣ್ಯಗಳ ಟಂಕಸಾಲೆ ಎಂದೇ ಹೆಸರಾದ ಈ ಐತಿಹಾಸಿಕ ನೆಲದ ಮಣ್ಣಿನ ಅಡಿಯಲ್ಲಿ ಅಗಾಧ ಸಂಪತ್ತು ಅಡಗಿದೆ ಎಂಬ ಮಾತುಗಳು ಅನಾದಿಕಾಲದಿಂದಲೂ ಕೇಳಿಬರುತ್ತಿವೆ. ಈಗ ಅಲ್ಲಿನ ಐತಿಹಾಸಿಕ ಕೋಡಿ ಬಸವಣ್ಣ ದೇವಸ್ಥಾನದ ಗರ್ಭಗುಡಿಯಲ್ಲಿ ನಾಗರಹಾವಿನ ಪೊರೆ ಪತ್ತೆಯಾಗಿರುವುದು ರಹಸ್ಯಕ್ಕೆ ಹೊಸ ತಿರುವು ನೀಡಿದ್ದು, ನಿಧಿಯನ್ನು ನಾಗಸರ್ಪಗಳು ಕಾಯುತ್ತಿವೆ ಎಂಬ ನಂಬಿಕೆ ಸಾರ್ವಜನಿಕರಲ್ಲಿ ದಟ್ಟವಾಗಿದೆ.

ದೇವಸ್ಥಾನದ ಗರ್ಭಗುಡಿಯ ಬಲಭಾಗದಲ್ಲಿರುವ ಹಂಡೆ ಆಕಾರದ ಕಲ್ಲಿನ ಪೊದೆಯಲ್ಲಿ ಹಾವಿನ ಪೊರೆ ಕಂಡುಬಂದಿದ್ದು, ಇದು ಕೇವಲ ಕಾಕತಾಳೀಯವಲ್ಲ ಎಂದು ಸ್ಥಳೀಯರು ಭಾವಿಸುತ್ತಿದ್ದಾರೆ. ಪುರಾತನ ಕಾಲದಿಂದಲೂ ಈ ಭಾಗದಲ್ಲಿ ಅಪಾರ ನಿಧಿ ಇದೆ ಎಂಬ ನಂಬಿಕೆ ಇರುವುದರಿಂದ, ಸರ್ಪದ ಈ ಉಪಸ್ಥಿತಿಯು ನಿಧಿಯ ಕಾವಲಿಗಾಗಿಯೇ ಇರುವ ಸಂಕೇತವೆಂದು ನಂಬಲಾಗಿದೆ . ಚಾಲುಕ್ಯರ ಕಾಲದ ಬಂಗಾರದ ನಾಣ್ಯಗಳು ಇಲ್ಲಿನ ಮಣ್ಣಿನ ಪದರಗಳ ನಡುವೆ ಅಡಗಿರಬಹುದು ಎಂಬ ಕುತೂಹಲ ಈಗ ಗ್ರಾಮಸ್ಥರಲ್ಲಿ ಮತ್ತು ಇತಿಹಾಸ ಪ್ರಿಯರಲ್ಲಿ ಮನೆಮಾಡಿದೆ.

ಲಕ್ಕುಂಡಿಯ ಕಲ್ಲುಗಳಲ್ಲಿ ಅಡಗಿರುವ ಕೆತ್ತನೆಗಳಷ್ಟೇ ಇಲ್ಲಿನ ಮಣ್ಣಿನ ಅಡಿಯ ರಹಸ್ಯಗಳೂ ಆಕರ್ಷಕವಾಗಿವೆ. ಕೋಡಿ ಬಸವಣ್ಣ ದೇವಸ್ಥಾನದಲ್ಲಿ ಪತ್ತೆಯಾದ ಈ ಸರ್ಪದ ಕುರುಹುಗಳು ದೈವಿಕ ಶಕ್ತಿ ಮತ್ತು ನಿಧಿಯ ರಕ್ಷಣೆ ಎಂಬ ಚರ್ಚೆಯನ್ನು ಹೆಚ್ಚಿಸಿದೆ. ಒಂದೆಡೆ ಇತಿಹಾಸಕಾರರು ಇದನ್ನು ಪುರಾತತ್ವ ಇಲಾಖೆಯ ದೃಷ್ಟಿಕೋನದಿಂದ ನೋಡುತ್ತಿದ್ದರೆ, ಮತ್ತೊಂದೆಡೆ ಭಕ್ತರು ಮತ್ತು ಗ್ರಾಮಸ್ಥರು ಇದನ್ನು ಪವಾಡದಂತೆ ಕಂಡು ದೇವಸ್ಥಾನದ ಪಾವಿತ್ರ್ಯತೆ ಮತ್ತು ಅಲ್ಲಿನ ನಿಗೂಢ ಸಂಪತ್ತಿನ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.

Comments (0)

Your email address will not be published. Required fields are marked *

Back to top button