ನಿದ್ರೆಯಲ್ಲಿ ಕೆಳಗೆ ಬಿದ್ದಂತೆ ಆಗುತ್ತಾ ..? ಏನಿದು ‘ಹಿಪ್ನಿಕ್ ಜರ್ಕ್’.. ?

ನಾವೆಲ್ಲರೂ ಆರಾಮವಾಗಿ ನಿದ್ರೆಗೆ ಜಾರುತ್ತಿರುವಾಗ, ಇದ್ದಕ್ಕಿದ್ದಂತೆ ಎತ್ತರದಿಂದ ಕೆಳಗೆ ಬಿದ್ದಂತೆ ಅನಿಸಿ, ಮೈ ಕೊಡವಿ ಎಚ್ಚರವಾದ ಅನುಭವವನ್ನು ಒಂದಲ್ಲಾ ಒಂದು ಬಾರಿ ಪಡದೇ ಇರುತ್ತೇವೆ. ಆ ಕ್ಷಣದಲ್ಲಿ ಮೈ ಬೆವರುವುದು ಅಥವಾ ಹೃದಯ ಬಡಿತ ಜೋರಾಗುವುದು ಸಹಜ. ವಿಜ್ಞಾನದಲ್ಲಿ ಈ ಪ್ರಕ್ರಿಯೆಯನ್ನು ‘ಹಿಪ್ನಿಕ್ ಜರ್ಕ್’ (Hypnic Jerk) ಎಂದು ಕರೆಯಲಾಗುತ್ತದೆ. ಇದು ನಾವು ಎಚ್ಚರವಿರುವ ಸ್ಥಿತಿಯಿಂದ ನಿದ್ರೆಯ ಸ್ಥಿತಿಗೆ ಹೋಗುವಾಗ ಸಂಭವಿಸುವ ಒಂದು ಅನೈಚ್ಛಿಕ ಸ್ನಾಯು ಸೆಳೆತವಾಗಿದೆ.

ನಿದ್ರೆಯಲ್ಲಿ ಕೆಳಗೆ ಬಿದ್ದಂತೆ ಅನಿಸಿ ಬೆಚ್ಚಿಬೀಳ್ತೀರಾ?ಇದರ ಹಿಂದೆ ಅಡಗಿದೆ ದೊಡ್ಡ ರಹಸ್ಯ!
ನಾವು ಮಲಗಿದಾಗ ನಮ್ಮ ಉಸಿರಾಟ ನಿಧಾನವಾಗುತ್ತದೆ ಮತ್ತು ಸ್ನಾಯುಗಳು ಸಂಪೂರ್ಣವಾಗಿ ಸಡಿಲಗೊಳ್ಳುತ್ತವೆ. ಈ ಸಮಯದಲ್ಲಿ ನಮ್ಮ ಮೆದುಳು ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತದೆ. ವಿಶೇಷವಾಗಿ ನಾವು ಅತಿಯಾದ ಆಯಾಸಗೊಂಡಾಗ ಅಥವಾ ಒತ್ತಡದಲ್ಲಿದ್ದಾಗ, ಸ್ನಾಯುಗಳು ಅತಿ ವೇಗವಾಗಿ ಸಡಿಲಗೊಳ್ಳುತ್ತವೆ. ಆಗ ನಮ್ಮ ಮೆದುಳು ಇದನ್ನು ತಪ್ಪಾಗಿ ಅರ್ಥೈಸಿಕೊಂಡು, ದೇಹವು ಎಲ್ಲೋ ಬೀಳುತ್ತಿದೆ ಅಥವಾ ಅಪಾಯದಲ್ಲಿದೆ ಎಂದು ಭಾವಿಸುತ್ತದೆ. ತಕ್ಷಣ ನಮ್ಮನ್ನು ರಕ್ಷಿಸಲು ಮೆದುಳು ಸ್ನಾಯುಗಳಿಗೆ ಒಂದು ಬಲವಾದ ಎಲೆಕ್ಟ್ರಿಕ್ ಸಿಗ್ನಲ್ ಕಳುಹಿಸುತ್ತದೆ, ಇದರಿಂದಲೇ ನಾವು ಬೆಚ್ಚಿ ಬಿದ್ದು ಎಚ್ಚರವಾಗುತ್ತೇವೆ.

ಏನಿದು ಹಿಪ್ನಿಕ್ ಜರ್ಕ್?
ಹಿಪ್ನಿಕ್ ಜರ್ಕ್ ಯಾವುದೇ ಕಾಯಿಲೆಯಲ್ಲ, ಇದು ಮೆದುಳು ನಮ್ಮನ್ನು ಸುರಕ್ಷಿತವಾಗಿಡಲು ಮಾಡುವ ಒಂದು ಪ್ರಯತ್ನವಷ್ಟೇ. ಆದರೆ ಅತಿಯಾದ ಕೆಫೀನ್ ಸೇವನೆ (ಕಾಫಿ/ಟೀ), ನಿದ್ರೆಯ ಕೊರತೆ ಮತ್ತು ಮಾನಸಿಕ ಒತ್ತಡವು ಈ ಸ್ಥಿತಿಯನ್ನು ಹೆಚ್ಚಿಸಬಹುದು. ಉತ್ತಮ ನಿದ್ರೆಯ ಅಭ್ಯಾಸ ಮತ್ತು ಒತ್ತಡ ರಹಿತ ಜೀವನಶೈಲಿಯಿಂದ ಇದನ್ನು ನಿಯಂತ್ರಿಸಬಹುದು. ಆದ್ದರಿಂದ ನಿದ್ರೆಯಲ್ಲಿ ಕೆಳಗೆ ಬಿದ್ದಂತೆ ಅನಿಸಿದರೆ ಗಾಬರಿಪಡುವ ಅಗತ್ಯವಿಲ್ಲ, ಅದು ನಿಮ್ಮ ಮೆದುಳು ನಿಮ್ಮನ್ನು ಎಚ್ಚರಿಸುತ್ತಿರುವ ಒಂದು ಸಂಕೇತವಾಗಿದೆ.




