Wednesday, February 11, 2026
17.1 C
Bengaluru
Google search engine
LIVE
ಮನೆ#Exclusive NewsTop Newsಮೆಟ್ರೋ ದರ ಗೊಂದಲ; ಕೇಂದ್ರದ ಸೂಚನೆ ಇದ್ದರೂ ಸಿಗದ ಅಧಿಕೃತ ಪತ್ರ!

ಮೆಟ್ರೋ ದರ ಗೊಂದಲ; ಕೇಂದ್ರದ ಸೂಚನೆ ಇದ್ದರೂ ಸಿಗದ ಅಧಿಕೃತ ಪತ್ರ!

ನಮ್ಮ ಮೆಟ್ರೋ ಪ್ರಯಾಣ ದರ ನಾಳೆಯಿಂದ ಏರಿಕೆಯಾಗಲಿದೆಯೇ ಅಥವಾ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆಯೇ ಎಂಬ ಕುರಿತು ಬೆಂಗಳೂರಿನ ಜನತೆಯಲ್ಲಿ ತೀವ್ರ ಕುತೂಹಲ ಮತ್ತು ಗೊಂದಲ ಮೂಡಿದೆ. ಈ ಬಗ್ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ , ಮೆಟ್ರೋ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರ ಸದ್ಯಕ್ಕೆ ತಾತ್ಕಾಲಿಕ ತಡೆ ನೀಡಿದೆ ಎಂದು ತಿಳಿಸಿದ್ದಾರೆ. ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಖಟ್ಟರ್ ಅವರು ಈ ಬಗ್ಗೆ ಸೂಚನೆ ನೀಡಿದ್ದು, ಸೋಮವಾರದಿಂದ ದರ ಏರಿಕೆ ಇರುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿಮಿಟೆಡ್‌ಗೆ ಇನ್ನೂ ತಾಂತ್ರಿಕ ತೊಡಕುಗಳು ಎದುರಾಗಿವೆ. ಕೇಂದ್ರ ಸರ್ಕಾರವು ದರ ಏರಿಕೆಗೆ ತಡೆ ನೀಡುವ ಬಗ್ಗೆ ಮೌಖಿಕವಾಗಿ ಸೂಚನೆ ನೀಡಿದ್ದರೂ, ಬಿಎಂಆರ್‌ಸಿಎಲ್‌ಗೆ ಅಧಿಕೃತವಾದ ಲಿಖಿತ ಆದೇಶದ ಪತ್ರ ಇದುವರೆಗೂ ತಲುಪಿಲ್ಲ ಎನ್ನಲಾಗಿದೆ. ಯಾವುದೇ ಒಂದು ಆಡಳಿತಾತ್ಮಕ ನಿರ್ಧಾರವನ್ನು ಬದಲಿಸಲು ಅಧಿಕೃತ ಆದೇಶದ ಅಗತ್ಯವಿದ್ದು, ಅಲ್ಲಿಯವರೆಗೆ ಹಳೆಯ ಪ್ರಸ್ತಾವನೆಯೇ ಚಾಲ್ತಿಯಲ್ಲಿರುತ್ತದೆ.

ಒಂದು ವೇಳೆ ಇಂದು ತಡರಾತ್ರಿಯೊಳಗೆ ಕೇಂದ್ರದಿಂದ ಅಧಿಕೃತ ಪತ್ರ ಬಾರದೇ ಇದ್ದಲ್ಲಿ, ತಾಂತ್ರಿಕವಾಗಿ ನಾಳೆಯಿಂದಲೇ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ಮಾಹಿತಿ ನೀಡಿವೆ. ಮೆಟ್ರೋ ದರ ನಿಗದಿ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರಲು ನಿಗಮವು ಈಗಾಗಲೇ ಸಿದ್ಧತೆ ಮಾಡಿಕೊಂಡಿತ್ತು. ಈಗ ಕೇಂದ್ರದ ಮಧ್ಯಪ್ರವೇಶದಿಂದಾಗಿ ದರ ಏರಿಕೆ ಸ್ಥಗಿತಗೊಳ್ಳುವ ಭರವಸೆ ಇದ್ದರೂ, ಅಧಿಕೃತ ಆದೇಶಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

ನಾಳೆ ಬೆಳಿಗ್ಗೆ ಮೆಟ್ರೋ ನಿಲ್ದಾಣಗಳಲ್ಲಿ ಟಿಕೆಟ್ ಪಡೆಯುವಾಗ ಹಳೆಯ ದರವಿರುತ್ತದೆಯೇ ಅಥವಾ ಹೊಸ ದರ ಅನ್ವಯವಾಗುತ್ತದೆಯೇ ಎಂಬುದು ಈಗಲೂ ಅಸ್ಪಷ್ಟವಾಗಿದೆ. ಕೇಂದ್ರದ ಅಂತಿಮ ಆದೇಶದ ಪತ್ರವೇ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಬೇಕಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments