ಜಿಲ್ಲೆದೇಶ/ವಿದೇಶರಾಜ್ಯಸುದ್ದಿ

ಕೃತಕ ಕಾಲು ಪ್ರದರ್ಶಿಸಿದ್ದ ಸದಾನಂದನ್ ಮಾಸ್ಟರ್: ಸಂಸದನ ಧೈರ್ಯಕ್ಕೆ ಪ್ರಧಾನಿ ಫಿದಾ

ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣದ ಮೂಲಕ ಇಡೀ ದೇಶದ ಗಮನ ಸೆಳೆದ ಕೇರಳದ ಬಿಜೆಪಿ ಸಂಸದ ಸಿ. ಸದಾನಂದನ್ ಮಾಸ್ಟರ್ ಅವರ ಧೈರ್ಯ ಮತ್ತು ರಾಷ್ಟ್ರಪ್ರೇಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪತ್ರ ಬರೆಯುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಸದನದಲ್ಲಿ ಶಾಂತಚಿತ್ತದಿಂದ ಮತ್ತು ದೃಢ ವಿಶ್ವಾಸದಿಂದ ಮಾತನಾಡಿದ ರೀತಿ ಶ್ಲಾಘನೀಯ ಎಂದು ಪ್ರಧಾನಿ ಹೊಗಳಿದ್ದು, ಈ ಪ್ರಶಂಸೆಯು ತಮ್ಮ ಸೇವಾ ಸಂಕಲ್ಪಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಸದಾನಂದನ್ ಮಾಸ್ಟರ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಸದಾನಂದನ್ ಮಾಸ್ಟರ್ ಅವರು ರಾಜ್ಯಸಭೆಯಲ್ಲಿ ಮಾತನಾಡುತ್ತಾ, 1994ರಲ್ಲಿ ಕೇರಳದಲ್ಲಿ ಸಿಪಿಐಎಂ ಕಾರ್ಯಕರ್ತರಿಂದ ನಡೆದ ಅಮಾನವೀಯ ದಾಳಿಯನ್ನು ವಿವರಿಸಿದ್ದರು. ಆ ಭೀಕರ ಘಟನೆಯಲ್ಲಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದ ಅವರು, ಅಂದು ತಾವು ಅನುಭವಿಸಿದ ಹಿಂಸೆಯನ್ನು ನೆನಪಿಸಿಕೊಳ್ಳುತ್ತಾ ಸದನದ ಬೆಂಚ್ ಮೇಲೆ ತಮ್ಮ ಕೃತಕ ಕಾಲುಗಳನ್ನು ಪ್ರದರ್ಶಿಸಿದ್ದು ಇಡೀ ಸಂಸತ್ತನ್ನೇ ಭಾವುಕಗೊಳಿಸಿತ್ತು. ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವವರು ಸೈದ್ಧಾಂತಿಕ ವಿರೋಧಿಗಳ ಮೇಲೆ ನಡೆಸಿದ ಈ ದಾಳಿಯು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಪ್ರಧಾನಿ ಮೋದಿ ಅವರು ಬರೆದ ಪತ್ರದಲ್ಲಿ, ಸದಾನಂದನ್ ಮಾಸ್ಟರ್ ಅವರನ್ನು ದೀರ್ಘ ಕಾಲದ ಸೇವಾ ಮನೋಭಾವದ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಸಂಸತ್ತಿಗೆ ಹೊಸಬರಾದರೂ ಅವರ ಮಾತುಗಳಲ್ಲಿ ನೈತಿಕ ಶಕ್ತಿ ಮತ್ತು ದೃಢತೆ ಎದ್ದು ಕಾಣುತ್ತಿತ್ತು ಎಂದು ಮೋದಿ ತಿಳಿಸಿದ್ದಾರೆ. ದಾಳಿಯ ನಂತರವೂ ಎದೆಗುಂದದೆ ಬಿಜೆಪಿಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿ ಇಂದು ರಾಜ್ಯಸಭಾ ಸದಸ್ಯರಾಗಿರುವುದು ದೇಶಕ್ಕೆ ಮತ್ತು ಸಂಸತ್ತಿಗೆ ಪ್ರೇರಣಾದಾಯಕವಾಗಿದೆ ಎಂದು ಪ್ರಧಾನಿ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಧಾನಿಯವರಿಂದ ಬಂದ ಈ ಪತ್ರಕ್ಕೆ ಎಕ್ಸ್ ಖಾತೆ ಮೂಲಕ ಪ್ರತಿಕ್ರಿಯಿಸಿದ ಸದಾನಂದನ್ ಮಾಸ್ಟರ್, ಪ್ರಧಾನಮಂತ್ರಿಯವರ ಈ ಅಪರೂಪದ ಪ್ರೋತ್ಸಾಹದ ಮಾತುಗಳು ಸಾರ್ವಜನಿಕ ಜೀವನದಲ್ಲಿ ಇನ್ನಷ್ಟು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಲು ನನಗೆ ಉತ್ತೇಜನ ನೀಡುತ್ತವೆ ಎಂದಿದ್ದಾರೆ. ದೈಹಿಕ ಅಂಗವಿಕಲತೆಯನ್ನೂ ಮೀರಿ ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರ ನಡೆಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Comments (0)

Your email address will not be published. Required fields are marked *

Back to top button