#Exclusive NewsTop Newsಜಿಲ್ಲೆರಾಜ್ಯವೈರಲ್ ನ್ಯೂಸ್ಸುದ್ದಿ

ಸಿದ್ದಾಪುರ ಕೇಸ್; ಕೋರ್ಟ್ ಆವರಣದಲ್ಲೇ ಆರೋಪಿಗಳಿಗೆ ಜನರಿಂದ ಧರ್ಮದೇಟು

ಉತ್ತರ ಕನ್ನಡ:ಸಿದ್ದಾಪುರದಲ್ಲಿ ನಡೆದ ವಸಂತ ನಾಯ್ಕ್ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ಪೊಲೀಸರು ಆರೋಪಿಗಳನ್ನು ಜೀಪ್‌ನಲ್ಲಿ ಕರೆತರುತ್ತಿದ್ದಂತೆ ರೊಚ್ಚಿಗೆದ್ದ ಸ್ಥಳೀಯರು, ವಾಹನವನ್ನು ತಡೆದು ಎ1 ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಹಾಗೂ ಜ್ಯೋತಿಷಿ ಕಮಲಾಕರ ಭಟ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಸಾರ್ವಜನಿಕರು ಚಪ್ಪಲಿಯಿಂದ ಆರೋಪಿಗಳಿಗೆ ಥಳಿಸಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ಈ ಅಮಾನುಷ ಕೊಲೆ ಪ್ರಕರಣದ ಹಿಂದೆ ಅಕ್ರಮ ಸಂಬಂಧದ ಶಂಕೆ ವ್ಯಕ್ತವಾಗಿದ್ದು, ಇದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸುಚಿತ್ರಾ ಮತ್ತು ಜ್ಯೋತಿಷಿ ಕಮಲಾಕರ ಭಟ್ ನಡುವಿನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿ ವಸಂತ ನಾಯ್ಕ್‌ನನ್ನು ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಭೀಕರತೆಯನ್ನು ಖಂಡಿಸಿ ಸಾರ್ವಜನಿಕರು ತಡರಾತ್ರಿಯವರೆಗೆ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಸಿದ್ದಾಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನಾಲ್ವರು ಆರೋಪಿಗಳನ್ನು ಹಾಜರುಪಡಿಸುವ ಸಂದರ್ಭದಲ್ಲಿ ನಡೆದ ಈ ಹಲ್ಲೆ ಘಟನೆಯು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಿಸಿತ್ತು. ಆರೋಪಿಗಳು ಜನರ ಕೈಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಬಿಡದ ಸ್ಥಳೀಯರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದು, ಅಕ್ರಮ ಸಂಬಂಧ ಮತ್ತು ಕೊಲೆ ಸಂಚಿನ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Comments (0)

Your email address will not be published. Required fields are marked *

Back to top button