
ಉತ್ತರ ಕನ್ನಡ : ಸಿದ್ದಾಪುರದಲ್ಲಿ ನಡೆದ ಭೀಕರ ಕೊಲೆ ಪ್ರಕರಣವೊಂದು ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರು ಮಹಿಳೆಯೊಬ್ಬರ ಜೊತೆ ಹೊಂದಿದ್ದ ಎನ್ನಲಾದ ಅನೈತಿಕ ಸಂಬಂಧ ಮತ್ತು ಅದಕ್ಕೆ ಅಡ್ಡಿಯಾದ ಪತಿಯನ್ನು ಮುಗಿಸಲು ನಡೆಸಿದ ಸಂಚು ಈಗ ಬಯಲಾಗಿದೆ. ಈ ದ್ವೇಷದ ಜಾಲಕ್ಕೆ ಅಮಾಯಕನೊಬ್ಬ ಬಲಿಯಾಗಿದ್ದಾನೆ.
ಸಿದ್ದಾಪುರದ ಮಹೇಶ್ ನಾಯ್ಕ್ ಎಂಬುವವರ ಪತ್ನಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ನಡುವೆ ಅನೈತಿಕ ಸಂಬಂಧವಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ವಿಚಾರವಾಗಿ ದಂಪತಿಗಳ ನಡುವೆ ಜಗಳ ನಡೆದಿತ್ತು. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದ ಪತಿ ಮಹೇಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಿಸಲು ಸುಚಿತ್ರಾ ಮತ್ತು ಕಮಲಾಕರ್ ಭಟ್ ಸ್ಕೆಚ್ ಹಾಕಿದ್ದರು ಎನ್ನಲಾಗಿದೆ.
ಸುಚಿತ್ರಾ ಕಳುಹಿಸಿದ್ದ ಸುಪಾರಿ ಹಂತಕರ ಗ್ಯಾಂಗ್ ಮಹೇಶ್ ನಾಯ್ಕ್ ಮೇಲೆ ಏಕಾಏಕಿ ದಾಳಿ ಮಾಡಲು ಮುಂದಾಗಿತ್ತು. ಈ ಅಪಾಯವನ್ನು ಅರಿತ ಮಹೇಶ್‌ನ ಅಣ್ಣ ವಸಂತ್ ನಾಯ್ಕ್, ತನ್ನ ತಮ್ಮನನ್ನು ಕಾಪಾಡಲು ಓಡೋಡಿ ಬಂದಿದ್ದಾರೆ. ಗಲಾಟೆಯ ನಡುವೆ ಮಹೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರಾದರೂ, ಅವರನ್ನು ರಕ್ಷಿಸಲು ಹೋದ ಅಣ್ಣ ವಸಂತ್ ನಾಯ್ಕ್ ಹಂತಕರ ಕೈಗೆ ಸಿಲುಕಿ ಬರ್ಬರವಾಗಿ ಕೊಲೆಯಾಗಿದ್ದಾರೆ.
ಕೊಲೆ ನಡೆದ ಕೇವಲ 24 ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಸಿದ್ದಾಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಪತ್ನಿ ಸುಚಿತ್ರಾ, ಆಕೆಯ ತಂದೆ ಲೋಕನಾಥ್ ಹಾಗೂ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅವರನ್ನೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಭವಿಷ್ಯ ಹೇಳುವ ಜ್ಯೋತಿಷಿಯೇ ಈ ರೀತಿ ಕ್ರಿಮಿನಲ್ ಸಂಚಿನಲ್ಲಿ ಭಾಗಿಯಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.




