ಸಿನಿಮಾಸುದ್ದಿ

ಪ್ರಿನ್ಸ್ ಮಗಳ ರಾಯಲ್ ವಾಕ್: ರ‍್ಯಾಂಪ್ ಮೇಲೆ ಸಿತಾರಾ ಘಟ್ಟಮನೇನಿ ಮಿಂಚಿಂಗ್

ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಗಳು ಸಿತಾರಾ ಘಟ್ಟಮನೇನಿ ಈಗ ಕೇವಲ ‘ಸ್ಟಾರ್ ಕಿಡ್’ ಮಾತ್ರವಲ್ಲ, ಗ್ಲಾಮರ್ ಲೋಕದ ಉದಯೋನ್ಮುಖ ತಾರೆ. ಇತ್ತೀಚೆಗೆ ನಡೆದ ಪ್ರತಿಷ್ಠಿತ ಜ್ಯುವೆಲರಿ ಬ್ರ್ಯಾಂಡ್‌ನ ಇವೆಂಟ್‌ನಲ್ಲಿ ಸಿತಾರಾ ನಡೆಸಿದ ರ‍್ಯಾಂಪ್ ವಾಕ್ ಈಗ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ.

ವೇದಿಕೆ ಮೇಲೆ ‘ಲಿಟಲ್ ಪ್ರಿನ್ಸೆಸ್’ ದರ್ಬಾರ್!

ತಮ್ಮ ತಂದೆಯಂತೆಯೇ ಅದ್ಭುತ ವ್ಯಕ್ತಿತ್ವ ಹೊಂದಿರುವ 14 ವರ್ಷದ ಸಿತಾರಾ, ಜ್ಯುವೆಲರಿ ಕಂಪನಿಯ ಕಾರ್ಯಕ್ರಮದಲ್ಲಿ ಬೆರಗುಗೊಳಿಸುವ ರ್ಯಾಂಪ್​​ ವಾಕ್​​​ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಈಗಾಗಲೇ ಸಣ್ಣ ವಯಸ್ಸಿಗೆ ದೊಡ್ಡ ಹೆಸರು ಮಾಡಿರುವ ಸಿತಾರಾ, ರ‍್ಯಾಂಪ್ ಮೇಲೆ ವೃತ್ತಿಪರ ಮಾಡೆಲ್‌ಗಳಿಗೂ ಸವಾಲು ಹಾಕುವಂತೆ ಹೆಜ್ಜೆ ಹಾಕಿದ್ದಾರೆ.

ಬ್ರ್ಯಾಂಡ್ ಪ್ರಚಾರದ ಮೂಲಕ ಸಿತಾರಾ ಅವರಿಗೆ ಭಾರಿ ಸಂಭಾವನೆ ಸಿಗುತ್ತಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಪುಟ್ಟ ಹುಡುಗಿ ತನಗೆ ಬಂದ ಸಂಭಾವನೆಯನ್ನು ಕೇವಲ ತನ್ನ ಐಷಾರಾಮಿ ಜೀವನಕ್ಕೆ ಬಳಸುತ್ತಿಲ್ಲ. ಬದಲಾಗಿ, ಸಮಾಜಮುಖಿ ಕೆಲಸಗಳಿಗೆ ಮತ್ತು ದಾನ ಧರ್ಮಗಳಿಗೆ ವಿನಿಯೋಗಿಸುವ ಮೂಲಕ ತಂದೆಯಂತೆಯೇ ದೊಡ್ಡ ಗುಣ ತೋರುತ್ತಿದ್ದಾರೆ.

ಪ್ರಸ್ತುತ ಸಿತಾರಾ ಅವರ ಸಂಪೂರ್ಣ ಗಮನ ಶಿಕ್ಷಣದ ಮೇಲಿದೆ. ವಿದ್ಯಾಭ್ಯಾಸದ ಬಿಡುವಿನ ವೇಳೆಯಲ್ಲಿ ಮಾತ್ರ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಮಹೇಶ್ ಬಾಬು ಮತ್ತು ನಮ್ರತಾ ಶಿರೋಡ್ಕರ್ ತಮ್ಮ ಮಗಳ ಆಸಕ್ತಿಗೆ ಪೂರ್ಣ ಬೆಂಬಲ ನೀಡುತ್ತಿದ್ದಾರೆ. ಸದ್ಯ ಮಾಡೆಲಿಂಗ್‌ನಲ್ಲಿ ಮಿಂಚುತ್ತಿರುವ ಸಿತಾರಾ, ಮುಂದಿನ ದಿನಗಳಲ್ಲಿ ಬೆಳ್ಳಿಪರದೆಗೆ ನಾಯಕಿಯಾಗಿ ಎಂಟ್ರಿ ಕೊಟ್ಟರೂ ಅಚ್ಚರಿಯಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು.

ಶೂಟಿಂಗ್ ಎಷ್ಟೇ ಬ್ಯುಸಿ ಇದ್ದರೂ ಮಹೇಶ್ ಬಾಬು ತಮ್ಮ ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಆಗಾಗ ಮಕ್ಕಳ ಜೊತೆ ವಿದೇಶ ಪ್ರವಾಸ ಕೈಗೊಳ್ಳುವ ಮಹೇಶ್, ಮಗಳ ಪ್ರತಿಯೊಂದು ಸಾಧನೆಯನ್ನು ಸಂಭ್ರಮಿಸುತ್ತಾರೆ. ಸದ್ಯ ವೈರಲ್ ಆಗಿರುವ ಸಿತಾರಾ ಅವರ ರ‍್ಯಾಂಪ್ ವಾಕ್ ಫೋಟೋಗಳನ್ನು ನೋಡಿ ಮಹೇಶ್ ಬಾಬು ಅಭಿಮಾನಿಗಳು “ಮುಂದಿನ ಸೂಪರ್ ಸ್ಟಾರ್ ರೆಡಿಯಾಗುತ್ತಿದ್ದಾರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Comments (0)

Your email address will not be published. Required fields are marked *

Back to top button