ರಾಜ್ಯಸುದ್ದಿ

ಲಾಂಗ್ ತೋರಿಸಿ ಹಾಡಹಗಲೇ 31 ಲಕ್ಷ ರೂ. ಲೂಟಿ; ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹೊರವಲಯದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಮಿತಿಮೀರಿದೆ. ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ಹಾಡಹಗಲೇ ಯುವಕನೊಬ್ಬನನ್ನು ಅಡ್ಡಗಟ್ಟಿ, ಲಾಂಗ್‌ನಿಂದ ಬೆದರಿಸಿ ಬರೋಬ್ಬರಿ 31.38 ಲಕ್ಷ ರೂ. ಹಣವನ್ನು ದರೋಡೆ ಮಾಡಿರುವ ಘಟನೆ ನಡೆದಿದೆ.

ಜೂಪಿಟರ್ ಬೈಕ್‌ನಲ್ಲಿ ಹಣ ಸಂಗ್ರಹಿಸಿ ತರುತ್ತಿದ್ದ ಕೈಲಾಸ್ ರಾಕೇಶ್ ಎಂಬುವರ ಬಳಿ ಕ್ಯಾಷ್ ಪಿಕಪ್ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಭಾನುವಾರ ಸಂಜೆ ಉಡಾನ್ ಕಂಪನಿಯ ಮೂರು ಶಾಖೆಗಳಿಂದ ಒಟ್ಟು 31,38,625 ರೂ. ಹಣವನ್ನು ಸಂಗ್ರಹಿಸಿ, ಬೈಕ್‌ನ ಡಿಕ್ಕಿಯಲ್ಲಿಟ್ಟುಕೊಂಡು ಸಕಲವಾರ ಕಡೆಯಿಂದ ಬನ್ನೇರುಘಟ್ಟ ರಸ್ತೆಯತ್ತ ಬರುತ್ತಿದ್ದರು.

ಸಂಜೆ ಸುಮಾರು 4:20ರ ವೇಳೆ ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿದ್ದ ನಾಲ್ವರು ದುಷ್ಕರ್ಮಿಗಳು, ನಿರ್ಜನ ಪ್ರದೇಶ ಸಿಗುತ್ತಿದ್ದಂತೆಯೇ ಕೈಲಾಸ್ ಅವರ ಬೈಕ್‌ಗೆ ಅಡ್ಡ ಹಾಕಿದ್ದಾರೆ. ಬೈಕ್ ನಿಲ್ಲಿಸುತ್ತಿದ್ದಂತೆಯೇ ಲಾಂಗ್ ಬೀಸಿ ಕೈಲಾಸ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪ್ರಾಣಭಯದಿಂದ ಕೈಲಾಸ್ ಹಿಂದೆ ಸರಿದಾಗ, ಹಣವಿದ್ದ ಬೈಕ್ ಸಮೇತ ದರೋಡೆಕೋರರು ಪರಾರಿಯಾಗಿದ್ದಾರೆ. ಸುಮಾರು ಒಂದು ಕಿಲೋಮೀಟರ್ ದೂರ ತೆರಳಿದ ದರೋಡೆಕೋರರು, ಬೈಕ್ ಅನ್ನು ಅಲ್ಲಿಯೇ ಬಿಟ್ಟು ಅದರಲ್ಲಿದ್ದ 31 ಲಕ್ಷಕ್ಕೂ ಅಧಿಕ ಹಣವನ್ನು ತೆಗೆದುಕೊಂಡು ನಾಪತ್ತೆಯಾಗಿದ್ದಾರೆ.

ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಲೊಕೇಶನ್ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ..

Comments (0)

Your email address will not be published. Required fields are marked *

Back to top button