
ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ನಡೆದಿದೆ ಎನ್ನಲಾದ 400 ಕೋಟಿ ರೂಪಾಯಿ ದರೋಡೆ ಪ್ರಕರಣವು ಈಗ ತನಿಖಾ ಸಂಸ್ಥೆ ಮತ್ತು ದೂರುದಾರರ ನಡುವಿನ ಸಂಘರ್ಷಕ್ಕೆ ಸಾಕ್ಷಿಯಾಗಿದೆ.
ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ 400 ಕೋಟಿ ರೂಪಾಯಿ ಹಣವಿದ್ದ ಎರಡು ಟ್ರಕ್‌ಗಳನ್ನು ದರೋಡೆ ಮಾಡಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿತ್ತು. ಆದರೆ, ಈಗ ದೂರುದಾರ ಸಂದೀಪ್ ಪಾಟೀಲ್ ಅವರೇ ಎಸ್‌ಐಟಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಸ್‌ಐಟಿ ಪೊಲೀಸರು ದರೋಡೆಯಾದ ಮೊತ್ತವನ್ನು 400 ಕೋಟಿಯಿಂದ ಕೇವಲ 35 ಕೋಟಿ ರೂಪಾಯಿಗೆ ಇಳಿಸಿ ತೋರಿಸುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಳ್ಳುವ ಮೂಲಕ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದರೋಡೆಯಾದ ಹಣದ ಮಾಲೀಕ ಎನ್ನಲಾಗುತ್ತಿರುವ ಖ್ಯಾತ ಬಿಲ್ಡರ್ ಕಿಶೋರ್ಶೇಠ್ ನಿನ್ನೆ ಸಂಜೆ ನಾಸಿಕ್ ಜಿಲ್ಲೆಯ ಘೋಟಿ ಪೊಲೀಸ್ ಠಾಣೆಯಲ್ಲಿ ಎಸ್‌ಐಟಿ ಮುಂದೆ ಶರಣಾಗಿದ್ದಾನೆ. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಕಿಶೋರ್ ಶೇಠ್‌ನನ್ನು ಪ್ರಸ್ತುತ ವಿಚಾರಣೆಗೆ ಒಳಪಡಿಸಲಾಗಿದ್ದು, ಹಣದ ಮೂಲ ಮತ್ತು ದರೋಡೆಯ ಸತ್ಯಾಸತ್ಯತೆಯ ಬಗ್ಗೆ ಸ್ಫೋಟಕ ಮಾಹಿತಿ ಹೊರಬರುವ ನಿರೀಕ್ಷೆಯಿದೆ.
ದರೋಡೆಗೊಳಗಾದವು ಎನ್ನಲಾದ ಎರಡು ಬೃಹತ್ ಟ್ರಕ್‌ಗಳು ಇದುವರೆಗೂ ಪತ್ತೆಯಾಗಿಲ್ಲ ಎಂಬುದು ತನಿಖಾ ತಂಡಕ್ಕೆ ದೊಡ್ಡ ತಲೆನೋವಾಗಿದೆ. 400 ಕೋಟಿ ರೂಪಾಯಿಯಂತಹ ಬೃಹತ್ ಮೊತ್ತವನ್ನು ಸಾಗಿಸುತ್ತಿದ್ದ ವಾಹನಗಳು ಕಣ್ಮರೆಯಾಗಿರುವುದು ಮತ್ತು ಹಣದ ಮೊತ್ತದ ಬಗ್ಗೆ ದೂರುದಾರರು ಹಾಗೂ ಪೊಲೀಸರ ನಡುವೆ ಇರುವ ಭಿನ್ನಾಭಿಪ್ರಾಯಗಳು ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ.
ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಗಡಿ ಭಾಗಕ್ಕೆ ಸಂಬಂಧಿಸಿದ ಈ ಪ್ರಕರಣವನ್ನು ದೇಶದ ಅತಿದೊಡ್ಡ ದರೋಡೆ ಪ್ರಕರಣಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಒಂದು ಕಡೆ ದೂರುದಾರರು ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಅಥವಾ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸುತ್ತಿದ್ದರೆ, ಮತ್ತೊಂದೆಡೆ ಕಿಶೋರ್ ಶೇಠ್ ವಿಚಾರಣೆಯು ಪ್ರಕರಣಕ್ಕೆ ಹೊಸ ಆಯಾಮ ನೀಡುವ ಸಾಧ್ಯತೆಯಿದೆ.




