
ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಿಸಲಾಗಿದೆ. ಸ್ಪೀಕರ್ ಯು.ಟಿ. ಖಾದರ್ ಅವರು ಮಂಡಿಸಿದ ಸಂತಾಪ ಸೂಚಕ ನಿರ್ಣಯಕ್ಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರು ಬೆಂಬಲ ಸೂಚಿಸಿ, ಅಗಲಿದ ಜನನಾಯಕನಿಗೆ ಗೌರವ ಸಲ್ಲಿಸಿದರು.
ಸಂತಾಪ ಸೂಚಕ ನಿರ್ಣಯ ಮಂಡಿಸಿ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್, “ಅಜಿತ್ ಪವಾರ್ ಅವರು ಬಡವರ, ದಲಿತರ ಹಾಗೂ ರೈತರ ಧ್ವನಿಯಾಗಿದ್ದರು. ನೀರಾವರಿ, ಕೃಷಿ ಮತ್ತು ವಿದ್ಯುತ್ ಖಾತೆ ಸಚಿವರಾಗಿ ಅವರು ನೀಡಿದ ಸೇವೆ ಅಪಾರ. ಸಹಕಾರಿ ಕ್ಷೇತ್ರದಲ್ಲಿ ಅವರೊಬ್ಬ ಧುರೀಣರಾಗಿ ಗುರುತಿಸಿಕೊಂಡಿದ್ದರು,” ಎಂದು ಸ್ಮರಿಸಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, “ಅಜಿತ್ ಪವಾರ್ ದೇಶ ಕಂಡ ಅಪರೂಪದ ರಾಜಕಾರಣಿ. ಮುಂಜಾನೆ 7 ರಿಂದ ರಾತ್ರಿ 11 ರವರೆಗೆ ಜನರ ನಡುವೆಯೇ ಇರುತ್ತಿದ್ದ ಅವರ ಕೆಲಸದ ವೈಖರಿ ಮೆಚ್ಚುವಂತದ್ದು. ಕನ್ನಡಿಗರ ಬಗ್ಗೆ ಅವರು ಯಾವಾಗಲೂ ಸುಮಧುರ ಬಾಂಧವ್ಯ ಹೊಂದಿದ್ದರು,” ಎಂದು ನೆನಪಿಸಿಕೊಂಡರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, “ಅಜಿತ್ ಪವಾರ್ ಅವರು ಜನಸಾಮಾನ್ಯರ ನಡುವೆ ‘ದಾದಾ’ ಎಂದೇ ಖ್ಯಾತರಾಗಿದ್ದರು. ಎಂಟು ಬಾರಿ ಶಾಸಕರಾಗಿ, ಆರು ಬಾರಿ ಉಪಮುಖ್ಯಮಂತ್ರಿಯಾಗಿ ಸುದೀರ್ಘ ರಾಜಕೀಯ ಜೀವನ ನಡೆಸಿದ ಅವರು, ಎಂತಹ ಕಠಿಣ ಸಂದರ್ಭದಲ್ಲೂ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಹೊಂದಿದ್ದರು. ಅವರ ಸಾವು ನಿಜಕ್ಕೂ ಆಘಾತಕಾರಿ,” ಎಂದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ಸದಸ್ಯ ಲಕ್ಷ್ಮಣ ಸವದಿ ಮತ್ತು ಸುರೇಶ್ ಬಾಬು ಅವರು ಅಜಿತ್ ಪವಾರ್ ಅವರ ರಾಜಕೀಯ ಬದ್ಧತೆ ಮತ್ತು ಸಹಕಾರಿ ರಂಗಕ್ಕೆ ಅವರು ನೀಡಿದ ಕೊಡುಗೆಯನ್ನು ಕೊಂಡಾಡಿದರು. “ಅಜಿತ್ ಪವಾರ್ ಅವರಂತಹ ನಿಷ್ಠುರ ಮತ್ತು ಜನಾನುರಾಗಿ ರಾಜಕಾರಣಿ ಮತ್ತೆ ಹುಟ್ಟಿ ಬರಲಿ,” ಎಂದು ಲಕ್ಷ್ಮಣ ಸವದಿ ಹಾರೈಸಿದರು. ಸಂತಾಪ ಸೂಚನೆಯ ನಂತರ, ಸದನದ ಸದಸ್ಯರೆಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.




