
ನವದೆಹಲಿ: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಪವಾರ್ ಅವರು ಮಹಾರಾಷ್ಟ್ರದ ಜನರ ಸೇವೆಗೆ ಯಾವಾಗಲೂ ಮುಂಚೂಣಿಯಲ್ಲಿದ್ದ ನಾಯಕ ಎಂದು ಅವರು ಸ್ಮರಿಸಿದ್ದಾರೆ.
ಬಾರಾಮತಿಯಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ದುರ್ಮರಣಕ್ಕೀಡಾದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ‘ಎಕ್ಸ್’ ಮೂಲಕ ಸಂತಾಪವನ್ನು ಸೂಚಿಸಿದ್ದಾರೆ.ಅಜಿತ್ ಪವಾರ್ ಅವರು ತಳಮಟ್ಟದ ಜನರೊಂದಿಗೆ ಗಾಢವಾದ ಸಂಪರ್ಕ ಹೊಂದಿದ್ದ ಶ್ರೇಷ್ಠ ಜನನಾಯಕರಾಗಿದ್ದರು.
ಮಹಾರಾಷ್ಟ್ರದ ಜನರ ಸೇವೆಗೆ ಸದಾ ಮುಂಚೂಣಿಯಲ್ಲಿದ್ದ ಅವರು, ಅತ್ಯಂತ ಕಠಿಣ ಪರಿಶ್ರಮದ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ಆಡಳಿತಾತ್ಮಕ ವಿಷಯಗಳ ಬಗ್ಗೆ ಅವರಿಗಿದ್ದ ಅಪಾರ ಜ್ಞಾನ ಮತ್ತು ಬಡವರ ಹಾಗೂ ದೀನದಲಿತರ ಸಬಲೀಕರಣದ ಬಗ್ಗೆ ಅವರಿಗಿದ್ದ ಉತ್ಸಾಹ ನಿಜಕ್ಕೂ ಗಮನಾರ್ಹವಾದದ್ದು. ಅವರ ಅಕಾಲಿಕ ನಿಧನವು ನನಗೆ ಅತೀವ ದುಃಖ ತಂದಿದೆ. ಅವರ ಕುಟುಂಬ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.




