
ಬೆಳಗಾವಿ: ರಾಣಿ ಚನ್ನಮ್ಮ ಮೃಗಾಲಯದಲ್ಲಿ 28 ಕೃಷ್ಣ ಮೃಗಗಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಮಾರಣಾಂತಿಕ ವೈರಸ್ ಗೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಒಟ್ಟು 28 ಕೃಷ್ಣ ಮೃಗಗಳು ಮೃತಪಟ್ಟಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಮತ್ತು ಗೊಂದಲ ಹೆಚ್ಚಾಗಿದೆ.
ನವೆಂಬರ್ 13 ರಂದು ಮೃಗಾಲಯದಲ್ಲಿ 8 ಕೃಷ್ಣ ಮೃಗಗಳ ಸಾವು ಸಂಭವಿಸಿತ್ತು. ಆದರೆ, ಇಂದು ಒಂದೇ ದಿನ 20 ಕೃಷ್ಣ ಮೃಗಗಳು ಸಾವನ್ನಪ್ಪಿರುವುದು ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ಏಕಾಏಕಿ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದೆ. ಸಾವನ್ನಪ್ಪಿದ್ದ ಕೃಷ್ಣಮೃಗಳ ಮರಣೋತ್ತರ ಪರೀಕ್ಷೆ ನಡೆಸಿ, ಸ್ಯಾಂಪಲ್ ಸಂಗ್ರಹಿಸಿ ಮೈಸೂರಿನ ಲ್ಯಾಬ್ಗೆ ರವಾನೆ ಮಾಡಲಾಗಿದೆ. ಲ್ಯಾಬ್ನಿಂದ ವರದಿ ಬರೋ ಮುನ್ನವೇ ಮತ್ತೆ 20 ಕೃಷ್ಣಮೃಗಳು ಸಾವನ್ನಪ್ಪಿವೆ.
ಮಾರಣಾಂತಿಕ ವೈರಸ್ನಿಂದ ಮೃತಪಟ್ಟ ಬಗ್ಗೆ ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ. ಮೃಗಾಲಯದಲ್ಲಿ ಒಟ್ಟು 38 ಕೃಷ್ಣಮೃಗಳಿದ್ದು ಆ ಪೈಕಿ 28 ಸಾವನ್ನಪ್ಪಿವೆ. ಇನ್ನು ಮೃಗಾಲಯಕ್ಕೆ ಬೆಳಗಾವಿ ಎಸಿಎಫ್ ನಾಗರಾಜ್ ಭೇಟಿ ಪರಿಶೀಲನೆ ನಡೆಸಿದ್ದು, ಮೈಸೂರಿನಂದ ವೈದ್ಯರ ತಂಡವನ್ನೂ ಸಹ ಅಧಿಕಾರಿಗಳು ಕರೆಸಲು ಮುಂದಾಗಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಸಚಿವ ಈಶ್ವರ್ ಬಿ. ಖಂಡ್ರೆ, ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಈ 28 ಜಿಂಕೆಗಳ ಸಾವು ಆತಂಕದ ವಿಷಯ.
ಮೃಗಾಲಯಗಳಲ್ಲಿ ಪ್ರಾಣಿಗಳ ಸಾವುಗಳು ಸಂರಕ್ಷಣಾ ಜವಾಬ್ದಾರಿಯನ್ನು ಪ್ರಶ್ನಿಸುತ್ತವೆ ಎಂದು ಹೇಳಿದ್ದಾರೆ. ಅರಣ್ಯ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ತಕ್ಷಣದ ಸೂಚನೆ ನೀಡಿದ ಸಚಿವರು, ತಜ್ಞರ ಸಮಿತಿ ರಚಿಸಿ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಸಮಿತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಜೀವಿಶಾಸ್ತ್ರಜ್ಞರು ಮತ್ತು ಪಶು ಚಿಕಿತ್ಸಕರು ಇರಲಿದ್ದಾರೆ. ವಿಷಪ್ರಾಶನ, ಕಲುಷಿತ ಆಹಾರ ಅಥವಾ ನೀರಿನಿಂದ ಸೋಂಕು ಬಂದಿದೆಯೇ, ಬೆಕ್ಕು ಅಥವಾ ಇತರ ಸಾಕು ಪ್ರಾಣಿಗಳಿಂದ ಹರಡಿದೆಯೇ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಿ, 15 ದಿನಗಳಲ್ಲಿ ವರದಿ ಸಲ್ಲಿಸಿ ಎಂದು ಸೂಚಿಸಿದ್ದಾರೆ.




