
ಕೊಪ್ಪಳ: ಗಂಗಾವತಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಬರ್ಬರವಾಗಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳ ಪೈಕಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ..
ವೆಂಕಟೇಶ ಕುರುಬರ (31) ವರ್ಷ ಕೊಲೆಯಾದ ಬಿಜೆಪಿ ನಾಯಕ. ಈ ಘಟನೆಯು ಗಂಗಾವತಿ ನಗರದ ಲೀಲಾವತಿ ಆಸ್ಪತ್ರೆಯ ಮುಂಭಾಗದಲ್ಲಿ ತಡರಾತ್ರಿ ನಡೆದಿದ್ದು, ರಾಜಕೀಯ ದ್ವೇಷದಿಂದ ಕೂಡಿದ ಕೃತ್ಯ ಎಂದು ಶಂಕಿಸಲಾಗಿದೆ. ಯುವ ಮೋರ್ಚಾ ಅಧ್ಯಕ್ಷನನ್ನು ಭೀಕರ ಹತ್ಯೆ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವೆಂಕಟೇಶ್ ಕುರುಬರ, ತಮ್ಮ ಸ್ನೇಹಿತರೊಂದಿಗೆ ದೇವಿ ಕ್ಯಾಂಪ್‌ನಿಂದ ಗಂಗಾವತಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ, ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗುಂಪೊಂದು ಉದ್ದೇಶಪೂರ್ವಕವಾಗಿ ಅವರ ಬೈಕ್‌ಗೆ ಗುದ್ದಿದೆ. ವೆಂಕಟೇಶ್ ಕೆಳಗೆ ಬಿದ್ದ ಕೂಡಲೇ, ಆರೋಪಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ, ಅವರನ್ನು ಕೊಲೆಗೈದು ಪರಾರಿಯಾಗಿದ್ದಾರೆ. ಈ ಘಟನೆಯು ಗಂಗಾವತಿ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಗಂಗಾವತಿ ಡಿವೈಎಸ್ಪಿ ಸಿದ್ಧನಗೌಡ ಪಾಟೀಲ್ ಮತ್ತು ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ, ಆರೋಪಿಗಳಾದ ಧನಂಜಯ್, ಮೈಲಾರಿ ಎಂಬ ವಿಜಯ್, ಸಲೀಂ, ಮತ್ತು ಭೀಮ ಎಂಬುವರನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿಯಲ್ಲಿ ಬಂಧಿಸಿದ್ದಾರೆ. ಐದನೇ ಆರೋಪಿಯ ಶೋಧ ಕಾರ್ಯ ಇನ್ನೂ ಮುಂದುವರೆದಿದೆ. ಪೊಲೀಸರು ಆರೋಪಿಗಳಿಂದ ಮಾಹಿತಿ ಸಂಗ್ರಹಿಸುತ್ತಿದ್ದು, ಕೊಲೆಯ ಹಿಂದಿನ ನಿಖರ ಕಾರಣವನ್ನು ಕಂಡುಹಿಡಿಯಲು ತನಿಖೆಯನ್ನು ಚುರುಕುಗೊಳಿಸಿದ್ದಾರೆ.




