ರಾಜಕೀಯ

ಬೆಲೆ ಏರಿಕೆ ಖಂಡಿಸಿ ಮುಂದುವರೆದ ಬಿಜೆಪಿ ಅಹೋರಾತ್ರಿ ಧರಣಿ

ಬೆಂಗಳೂರು: ರಾಜ್ಯ ಸರ್ಕಾರದ ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯಿಂದ ಫ್ರೀಡಂ ಪಾರ್ಕ್​ನಲ್ಲಿ ಅಹೋರಾತ್ರಿ ಧರಣಿ ಮುಂದುವರೆದಿದ್ದು,‌ ರಾತ್ರಿಯಾದರೂ ಮಾಜಿ ಸಿಎಂ ಯಡಿಯೂರಪ್ಪ ಉತ್ಸಾಹದಲ್ಲೇ ಧರಣಿಯಲ್ಲಿ ಕೂತಿದ್ದಾರೆ. ಹಿರಿಯ ಬಿಜೆಪಿ ಮುಖಂಡರೂ ಸಾಥ್​ ನೀಡಿದ್ದಾರೆ.

ಮಧ್ಯಾಹ್ನ 12 ಗಂಟೆಯಿಂದಲೂ ಯಡಿಯೂರಪ್ಪ ಭಾಗವಹಿಸಿದ್ದು, ರಾತ್ರಿಯಾದರೂ ಧರಣಿ ಮುಂದುವರೆಸಿದ್ದಾರೆ.‌ ಇತರ ಬಿಜೆಪಿ ನಾಯಕರೂ ಭಾಗವಹಿಸಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.‌

ಇನ್ನು ಧರಿಣಿಗೆ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಕಾಣಿಸಿಕೊಂಡಿದ್ದ ಶಾಸಕ ಬಿ.ಪಿ.ಹರೀಶ್​​ ಸಹ ಆಗಮಿಸಿದ್ರು. ಇದೇ ವೇಳೆ ಮುಂದಿನ ಸಿಎಂ ವಿಜಯೇಂದ್ರ ಎಂದು ಕಾರ್ಯಕರ್ತರು ಕೂಗಿದ ಹಿನ್ನಲೆ ಬಿ.ಪಿ,ಹರೀಶ್​ ಗೆ ಇರಿಸು ಮುರಿಸು ಉಂಟಾಗಿದೆ.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ”ಸರ್ಕಾರ ಎರಡು ವರ್ಷಗಳಿಂದ ಭ್ರಷ್ಟಾಚಾರದಲ್ಲಿ ಮುಳುಗಿದೆ. ನಾನು ಪಕ್ಷದ ಹೋರಾಟದಲ್ಲಿ ಇಂದು ಭಾಗವಹಿಸಿದ್ದೇನೆ. ನಾನು ಪಕ್ಷದ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸ್ತೇನೆ. ಮುಡಾ ಹೋರಾಟದಲ್ಲೂ ಪಾಲ್ಗೊಂಡಿದ್ದೆ, ಇದು ಒಬ್ಬ ವ್ಯಕ್ತಿಯ ಹೋರಾಟ ಅಲ್ಲ, ಪಕ್ಷದ‌ ಹೋರಾಟ. ಯತ್ನಾಳ್ ಮತ್ತಿತರರು ಯಾವುದೇ ಪಕ್ಷದ ಕಾರ್ಯಕ್ರಮಕ್ಕೆ ಬಂದಿಲ್ಲ, ನಾನು ಎಲ್ಲ ಕಾರ್ಯಕ್ರಮಕ್ಕೆ ಬಂದಿದ್ದೇನೆ” ಎಂದರು.

”ಶೋಕಾಸ್ ನೊಟೀಸ್​​ನಿಂದ ನನಗೆ ಶಿಕ್ಷೆಯ ಆತಂಕ ಇಲ್ಲ. ನಾನು ಯಾರ ಮೇಲೆ ಆರೋಪ ಮಾಡಿದ್ದೇನೋ ಅದು ಸತ್ಯ. ವಿಜಯೇಂದ್ರ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ” ಎಂದು ತಿಳಿಸಿದರು.

Comments (0)

Your email address will not be published. Required fields are marked *

Back to top button