ಕ್ರಿಕೆಟ್ರಾಜ್ಯಸುದ್ದಿ

ಮಂಗಳೂರು ರೋಹನ್ ಕಪ್ ಕ್ರಿಕೆಟ್‌ ಟೂರ್ನಿ ಟ್ರೋಪಿ ಅನಾವರಣ

ಮಂಗಳೂರು: ಬಂದರು, ವಿಮಾನಯಾನ, ರೈಲ್ವೆ, ಅತ್ಯುತ್ತಮ ಸಾರಿಗೆ ವ್ಯವಸ್ಥೆಯನ್ನು ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯು ಶಿಕ್ಷಣ, ಆರೋಗ್ಯ, ಧಾರ್ಮಿಕ, ಉದ್ಯಮ, ಸಾಂಸ್ಕೃತಿಕ ಕ್ಷೇತ್ರದಲ್ಲೂ ಮುಂದುವರೆದಿದ್ದು, ಈ ರೀತಿಯಾಗಿ ಸಮಗ್ರ ಅಭಿವೃದ್ಧಿ ಕಂಡ ನಗರ ದೇಶದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ಈ ವಿಭಿನ್ನತೆಯಿಂದ ದಕ್ಷಿಣ ಕನ್ನಡ ಜಿಲ್ಲೆ ದೇಶಕ್ಕೆ ಮಾದರಿ ಆಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಮಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಇದೇ 5 ರಿಂದ ಅಡ್ಯಾರ್ ಸಹ್ಯಾದ್ರಿ ಕ್ರೀಡಾಂಗಣದಲ್ಲಿ ಕ್ಯಾ. ಪ್ರಾಂಜಲ್ ಗೌರವಾರ್ಥ ನಡೆಯಲಿರುವ `ಕೆಯುಡಬ್ಲ್ಯುಜೆ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್’ ಟ್ರೋಫಿ ಅನಾವರಣ ಮಾಡಲಾಯಿತು.

ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, 4 ವರ್ಷದ ಹಿಂದೆ ಪತ್ರಕರ್ತರ ರಾಜ್ಯಮಟ್ಟದ ಸಮ್ಮೇಳನವನ್ನು ಯಶಸ್ವಿ, ಮಾದರಿಯಾಗಿ ನಡೆಸಿದ ಹೆಗ್ಗಳಿಕೆ ಪಡೆದುಕೊಂಡ ದಕ್ಷಿಣ ಕನ್ನಡ ಜಿಲ್ಲಾ ಸಂಘಕ್ಕೆ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದ ಅವಕಾಶ ಸಿಕ್ಕಿರುವುದು ನಿಜಕ್ಕೂ ನಮಗೆ ಹೆಮ್ಮೆ. ಕ್ರಿಕೆಟ್ ಪಂದ್ಯಾಟ ಹಾಗೂ ಪತ್ರಕರ್ತರ ಮಹಾಸಭೆಗೆ ರಾಜ್ಯದ ನಾನಾ ಜಿಲ್ಲೆಯಿಂದ ಬರುವ 600 ಕ್ಕೂ ಅಧಿಕ ಪತ್ರಕರ್ತರು ಆಗಮಿಸುತ್ತಿದ್ದು, ಅವರಿಗೆ ಆತಿಥ್ಯ ಸೇರಿದಂತೆ ಯಶಸ್ವಿ ಕ್ರೀಡಾಕೂಟ ಆಯೋಜಿಸಲು ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ರೋಹನ್ ಕಾರ್ಪೊರೇಷನ್ ಅಧ್ಯಕ್ಷ ರೋಹನ್ ಮೊಂತೆರೋ ಅವರು ಮಾತನಾಡಿ, ಉದ್ಯಮದಲ್ಲಿ ತೊಡಗಿಸಿಕೊಂಡ ನಾವು ದೇಶ- ವಿದೇಶಗಳನ್ನು ಸುತ್ತಾಡುತ್ತೇವೆ. ಆದರೆ ಕಲೆ, ಸಂಸ್ಕೃತಿ, ಧಾರ್ಮಿಕ ನಂಬಿಕೆ, ಸಹಬಾಳ್ವೆಯಂತಹ ಇಂತಹ ನಗರವನ್ನು ಮತ್ತೊಂದು ಕಡೆ ಕಾಣಲು ಸಾಧ್ಯವಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಸ್ವರ್ಗ ಎಂದರು. ಪತ್ರಕರ್ತರ ಬ್ರ್ಯಾಂಡ್ ಮಂಗಳೂರು ಪರಿಕಲ್ಪನೆ ನಿಜಕ್ಕೂ ಚೆನ್ನಾಗಿದ್ದು, ಈ ಶೀರ್ಷಿಕೆಯಲ್ಲಿ ನಡೆವ ಕ್ರೀಡಾಕೂಟಕ್ಕೆ ಬೇರೆ ಬೇರೆ ಜಿಲ್ಲೆ, ರಾಜ್ಯಗಳಿಂದ ಪತ್ರಕರ್ತರು ಬರುವ ಕಾರಣ ಮಂಗಳೂರಿನ ಬ್ರ್ಯಾಂಡ್ ಮತ್ತಷ್ಟು ವ್ಯಾಪ್ತಿಗೆ ಪಸರಿಸಲಿ. ಈ ಕ್ರೀಡಾಕೂಟಕ್ಕೆ ರೋಹನ್‌ ಕಾರ್ಪೋರೇಷನ್‌ ಟೈಟಲ್ ಪ್ರಾಯೋಜಕತ್ವ ನೀಡಿ ಭಾಗವಹಿಸುವುದಕ್ಕೆ ಹೆಮ್ಮೆ ಇದೆ ಎಂದರು.

ಕರ್ನಾಟಕ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ಕುಟ್ಟಪ್ಪ, ಸಂಘದ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ಉಪಸ್ಥಿತರಿದ್ದರು.

Comments (0)

Your email address will not be published. Required fields are marked *

Back to top button